ADVERTISEMENT

ಶೇಂಗಾ ಬಿತ್ತನೆಯತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 8:52 IST
Last Updated 18 ನವೆಂಬರ್ 2017, 8:52 IST

ಹನುಮಸಾಗರ: ಕಪ್ಪು ಭೂಮಿ ಹಾಗೂ ನೀರಾವರಿ ಆಶ್ರಿತ ಮಸಾರಿ ಭೂಮಿಯಲ್ಲಿ ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಬೇಕಾಗಿದ್ದ ಕಡಲೆ ಬೆಳೆಯ ಬದಲು ಈ ಬಾರಿ ಶೇಂಗಾದತ್ತ ರೈತರ ಚಿತ್ತ ಹರಿದಿದೆ.

ನೀರಾವರಿ ಹೊಂದಿರುವ ಜಮೀನಿನಲ್ಲಿ ಬಹುತೇಕ ಶೇಂಗಾ ಬಿತ್ತನೆಯಾಗಿದ್ದರೆ. ಕೃಷಿ ಹೊಂಡ ಹೊಂದಿರುವ ಕಪ್ಪು ಭೂಮಿಯ ರೈತರು ಒಂದು ಬಾರಿ ಬೆಳೆಗೆ ನೀರು ನೀಡಿದರೆ ಬೆಳೆ ಕೈಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಶೇಂಗಾ ಬೆಳೆಯಲು ಮುಂದಾಗಿದ್ದಾರೆ.

ಹಿಂದಿನ ವರ್ಷ ಕಡಲೆ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ತೀವ್ರ ಇಳಿತ ಕಂಡ ಬೆಲೆ ಕಹಿಯ ಕಾರಣವಾಗಿ ಈ ಬಾರಿ ರೈತರು ಕಡಲೆ ಬಿತ್ತನೆ ಮಾಡಲು ಹಿಂದೇಟ ಹಾಕುತ್ತಿದ್ದಾರೆ. ಅಲ್ಲದೆ ಶೇಂಗಾ ಮಾರುಕಟ್ಟೆಯಲ್ಲಿ ಬಹುತೇಕ ಸಮಾನಂತರ ಬೆಲೆ ಕಾಯ್ದುಕೊಂಡಿರು ವುದರಿಂದ ಗೆಜ್ಜಿ ಶೇಂಗಾ ಬಿತ್ತನೆ ದಾವಂತ ರೈತರಲ್ಲಿ ಕಂಡು ಬರುತ್ತಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ADVERTISEMENT

'ಹಿಂದಿನ ಬಾರಿ ಭರಪೂರ ಕಡಲೆ ಫಸಲು ಬಂದಿತ್ತು, ಫಸಲು ಕೊಯ್ಲು ಮಾಡುವ ಸಮಯದಲ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 8ಸಾವಿರ ಬೆಲೆ ಇತ್ತು, ರೈತರು ಮಾಲು ಮಾರುಕಟ್ಟೆಗೆ ಬರುತ್ತಿದ್ದಂತೆ ₹ 5ಸಾವಿರಕ್ಕೆ ಬೆಲೆ ಇಳಿಯಿತು, ಬೆಲೆ ಏರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಇಲ್ಲಿಯವರೆಗೂ ಫಸಲು ಮನೆಯಲ್ಲಿ ಇಟ್ಟುಕೊಂಡಿದ್ದೇವು, ಆದರೆ ಅನಿವಾರ್ಯವಾಗಿ ₹ 4,500ಕ್ಕೆ ಮಾರಾಟ ಮಾಡಬೇಕಾಯಿತು ಎಂದು ನೋವನ್ನು ತೋಡಿಕೊಳ್ಳುವ ಅಡವಿಭಾವಿಯ ಶಂಕ್ರಪ್ಪ ಗೌಡ್ರ ಕಡಲೆ ಬೆಳೆಗೆ ವಿರಾಮ ಹೇಳಿ ಶೇಂಗಾ ಬೆಳೆ ಬಿತ್ತನೆ ಮಾಡುತ್ತಿದ್ದಾರೆ.

ರೈತ ಸಂಪರ್ಕ ಕೇಂದ್ರದಲ್ಲೂ ಶೇಂಗಾ ಬೀಜಕ್ಕೆ ರೈತರಿಂದ ಭಾರಿ ಬೇಡಿಕೆ ಇದ್ದರೆ, ಕಡಲೆ ಬೀಜ ಮಾತ್ರ ಮೂಲೆ ಹಿಡಿದು ಕುಳಿತಿವೆ. ಶೇಂಗಾ ಬಿತ್ತನೆ ಮಾಡಿದರೆ ಕೈಗೆ ಕಾಸು ಬರುತ್ತದೆ ಜೊತೆಗೆ ಜಾನುವಾರುಗಳಿಗೆ ಹೊಟ್ಟು ದಕ್ಕುತ್ತದೆ, ಈ ಕಾರಣವಾಗಿ ಈ ಬಾರಿ ಶೇಂಗಾ ಬಿತ್ತನೆ ಮಾಡುತ್ತಿದ್ದೇವೆ ಎಂದು ಕಬ್ಬರಗಿಯ ಮಲ್ಲಪ್ಪ ಹಾಗೂ ಬಿಳಿಯಪ್ಪ ಹೇಳಿದರು.

ಈಗಾಗಲೇ 20 ಟನ್‌ ಗಿಂತಲೂ ಹೆಚ್ಚು ಶೇಂಗಾ ಬೀಜ ಬಿಕರಿಯಾಗಿವೆ, ಸದ್ಯ ಕ್ವಿಂಟಲ್‌ಗೆ ₹ 7300 ರಿಯಾಯಿತ ದರದಲ್ಲಿ ನೀಡುತ್ತಿದ್ದೇವೆ.ಇನ್ನೂ  ಶೇಂಗಾ ಬೀಜಕ್ಕೆ ಬೇಡಿಕೆ ಇದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರುಣಕುಮಾರ ಹೇಳಿದರು.

ಮೂರು ವರ್ಷಗಳಿಂದ ಕಡಲೆ ಹೇಳಿಕೊಳ್ಳುವಂತಹ ಇಳುವರಿ ಬರುತ್ತಿಲ್ಲ, ಅಬ್ಬಬ್ಬಾ ಎಂದರೆ ನಮ್ಮ ಭಾಗದಲ್ಲಿ ಎಕರೆಗೆ 4 ಕ್ವಿಂಟಲ್ ಬರುತ್ತದೆ, ಅದೇ ಶೇಂಗಾ ಬೆಳೆ ಎಕರೆಗೆ 12ಕ್ವಿಂಟಲ್ ವರೆಗೂ ಬೆಳೆಯಬಹುದಾಗಿದೆ ಎಂದು ಮಾಸಪ್ಪ ಕಬ್ಬರಗಿ ಹೇಳುತ್ತಾರೆ.

ಮಳೆಯ ಕೊರತೆಯಿಂದ ಕೊಳವೆ ಬಾವಿಗಳು ಬತ್ತುತ್ತಿದ್ದ ಕಾರಣವಾಗಿ ಪ್ರತಿ ವರ್ಷ ಅನಿವಾರ್ಯವಾಗಿ ರೈತರು ಕಡಲೆ ಬೆಳೆಯುತ್ತಿದ್ದರು. ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಬಿದ್ದಿರುವ ಕಾರಣವಾಗಿ ಕೆರೆಗಳು ತುಂಬಿವೆ. ಕೊಳವೆ ಬಾವಿಗಳಿಗೆ ಜೀವಸೆಲೆ ಬಂದಿದೆ, ಕೃಷಿ ಹೊಂಡಗಳು ತುಂಬಿವೆ ಈ ಬಾರಿ ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಲು ಮೂಲ ಕಾರಣವಾಗಿವೆ ಎಂದು ಶರಣಪ್ಪ ಕಬ್ಬರಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.