ADVERTISEMENT

ಸಚಿವ ರಾಯರಡ್ಡಿ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:06 IST
Last Updated 8 ನವೆಂಬರ್ 2017, 9:06 IST
ಯಲಬುರ್ಗಾದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ನಡೆಸಿದರು
ಯಲಬುರ್ಗಾದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ನಡೆಸಿದರು   

ಯಲಬುರ್ಗಾ: ‘ಹಣ ಲೂಟಿ ಹೊಡೆದು ಕ್ಷೇತ್ರದ ಮಾನವನ್ನು ಸಚಿವ ಬಸವರಾಜ ರಾಯರಡ್ಡಿ ಅವರು ಹರಾಜು ಹಾಕಿದ್ದು, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಲಪ್ಪ ಆಚಾರ ಒತ್ತಾಯಿಸಿದರು.

ಬಿಜೆಪಿ ಯುವ ಮೋರ್ಚಾ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ವಿ.ವಿಗಳ ಅಂಕಪಟ್ಟಿ ಮುದ್ರಣ ಹಾಗೂ ಲ್ಯಾಪ್‌ಟಾಪ್ ಖರೀದಿಯ ಹಗರಣದಲ್ಲಿ ಸಿಲುಕಿರುವ ರಾಯರಡ್ಡಿ ಅವರು, ಅಧಿಕಾರದಲ್ಲಿ ಉಳಿಯುವ ನೈತಿಕತೆ ಉಳಿಸಿಕೊಂಡಿಲ್ಲ’ ಎಂದರು.

‘ಸಚಿವರಾದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಹಗಲು ದರೋಡೆ ನಡೆಸಿದ್ದಾರೆ. ಪುಟ್ಟಣ್ಣಯ್ಯ ಅವರು ರಾಯರಡ್ಡಿ ಡಕಾಯಿತ ಎಂದು ಸದನದಲ್ಲಿಯೇ ಆರೋಪಿಸಿದ್ದಾರೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೂ ಹಾಗೂ ಆಯ್ಕೆ ಮಾಡಿದ ಮತಕ್ಷೇತ್ರದ ಜನರಿಗೆ ಮಾಡಿದ ಮಹಾ ದ್ರೋಹ. ಶೈಕ್ಷಣಿಕ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಈ ನಾಡಿನಲ್ಲಿ ಅದರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದು ಮಕ್ಕಳಿಗೆ ಮಾಡಿದ ದ್ರೋಹ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಖಂಡ ಈರಪ್ಪ ಕುಡಗುಂಟಿ ಮಾತನಾಡಿ, ‘ಯುಜಿಸಿ ನಿಯಮಾವಳಿ ಪ್ರಕಾರ ನೇಮಕ ಮಾಡಿಕೊಳ್ಳದೆ ಹಣ ಕೊಟ್ಟವರನ್ನು ಪದವಿ ಕಾಲೇಜಿಗೆ ನೇಮಿಸಲಾಗಿದೆ. ಈ ಮೊದಲು ಸೇವೆ ಸಲ್ಲಿಸಿದ ಅರ್ಹ ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು ಸಾವಿರಾರು ಕುಟುಂಬಗಳು ಬೀದಿಗೆ ಬರುವಂತೆ ಮಾಡಿದ್ದಾರೆ. ಈ ಪಾಪ ಕೃತ್ಯಕ್ಕೆ ದೇವರೇ ಶಿಕ್ಷೆ ಕೊಡಬೇಕು’ ಎಂದರು.

‘ಲಂಚ ಕೊಡುವವರಿಗೆ ಮಾತ್ರ ಗುತ್ತಿಗೆ ಕಾಮಗಾರಿವಹಿಸುವ ಸಚಿವರಿಂದ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸವಿಲ್ಲದಂತಾಗಿದೆ. ಬ್ಯಾನರ್ ಮೂಲಕ ಕೆರೆ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ರಾಯರಡ್ಡಿ ರೈತರಿಗೆ ದ್ರೋಹ ಮಾಡಿದ್ದಾರೆ’ ಎಂದು ಆಪಾದಿಸಿದರು.

ಮುಖಂಡ ನವೀನ ಗುಳಗಣ್ಣವರ್, ಸಿ.ಎಚ್.ಪೊಲೀಸ್‌ ಪಾಟೀಲ, ಕೊಟ್ರಪ್ಪ ತೋಟದ, ಅಡಿವೆಪ್ಪ ಭಾವಿಮನಿ, ಯುವ ಘಟಕದ ಅಧ್ಯಕ್ಷ ನಾಗರಾಜ ತಲ್ಲೂರ, ಹಂಚ್ಯಾಳಪ್ಪ ತಳವಾರ ಮಾತನಾಡಿದರು. ಅರವಿಂದಗೌಡ ಪಾಟೀಲ, ರತನ್ ದೇಸಾಯಿ, ಸುಧಾಕರ ದೇಸಾಯಿ, ಸಿದ್ದರಾಮೇಶ ಬೇಲೇರಿ, ವೀರಭದ್ರಪ್ಪ ಅವಾರಿ, ಪ್ರಬುರಾಜ ಕಲಬುರ್ಗಿ, ಮೈನುದ್ದೀನ್ ವಣಗೇರಿ, ಆದೇಶ ರೊಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.