ADVERTISEMENT

ಸನ್ಯಾಸಿಗಳಿಗೆ ಸಮಾಜವೇ ಬಂಧು ಬಳಗ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:53 IST
Last Updated 14 ಜುಲೈ 2017, 6:53 IST

ಕುಷ್ಟಗಿ: ‘ಸನ್ಯಾಸಿಗಳಿಗೆ ಸಮಾಜವೇ ಬಂಧು ಬಳಗ. ಮಠದ ನಿಜವಾದ ಆಸ್ತಿಯಾಗಿರುವ ಭಕ್ತ ಸಮೂಹವನ್ನು ನೋಡಿ ಉತ್ತರಾಧಿಕಾರಿಯಾಗಲು ಒಪ್ಪಿದ್ದೇನೆಯೇ ಹೊರತು ಇತರೆ ಯಾವುದೇ ಸಂಪತ್ತನ್ನು ನೋಡಿ ಅಲ್ಲ’ ಎಂದು ತಾಲ್ಲೂಕಿನ ಮುದೇನೂರು ಗ್ರಾಮದ ಉಮಾಚಂದ್ರಮೌಳೇಶ್ವರ ಮಠದ ನಿಯೋಜಿತ ಉತ್ತರಾಧಿಕಾರಿ ಸಿದ್ದಲಿಂಗದೇವರು ಹೇಳಿದರು.

ನೂತನ ಪೀಠಾಧಿಪತಿಯಾಗಿ ನಿಯೋಜನೆಗೊಂಡ ನಂತರ ಗುರುವಾರ ಗ್ರಾಮಕ್ಕೆ ಬಂದ ಅವರು ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ‘ಕೊಪ್ಪಳ ಗವಿಮಠವನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಮುದೇನೂರು ಮಠಕ್ಕೆ ಭವ್ಯ ಪರಂಪರೆ ಇದೆ. ಭಕ್ತರ ಸಹಕಾರದೊಂದಿಗೆ ಮಠವನ್ನು ಎರಡನೇ ಗವಿಮಠವನ್ನಾಗಿಸುವ ನಿಟ್ಟನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು’ ಎಂದು ಹೇಳಿದರು.

ಮದ್ದಾನಿಮಠದ ಕರಿಬಸವ ಸ್ವಾಮೀಜಿ ಮಾತನಾಡಿ, ‘ಮಠಾಧೀಶ ರಾದವರು ಕೇವಲ ಮಠಕ್ಕೆ ಸೀಮಿತರಾಗದೆ ಸಮಾಜದಲ್ಲಿನ ಎಲ್ಲ ಜನರ ಕಷ್ಟ ಸುಖಗಳಿಗೆ ಭಾವನಾತ್ಮಕ ವಾಗಿ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕಾವಿಧಾರಿಗಳು ಕಪ್ಪುಚುಕ್ಕೆ ಬೀಳದಂತೆ ನಡೆ, ನುಡಿ, ಆಚಾರ ವಿಚಾರಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎಂದರು.

ADVERTISEMENT

ಮಠದ ಹಿರಿಯರಾದ ಶಶಿಧರ  ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚನ್ನಬಸವ ಸ್ವಾಮೀಜಿ, ಕರಿಶಾಂತವೀರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ ಇದ್ದರು.  

ಮಲ್ಲನಗೌಡ ಓಲಿ, ಬಸಪ್ಪ ಗಡಗಿ, ಚಂದ್ರಶೇಖರ ಕಾಡಪ್ಪನವರ, ಚಂದ್ರಶೇಖರ ಮುದ್ದಲಗುಂದಿ, ಬಸನಗೌಡ ಹಾಗಲದಾಳ, ಚಂದ್ರಶೇಖರಗೌಡ ಮಾದಾಪುರ, ಋಷಭೇಂದ್ರಸ್ವಾಮಿ ನಾಗರಬೆಂಚಿ, ಚಂದ್ರಯ್ಯಸ್ವಾಮಿ ಇದ್ದರು. ಕತೃಗದ್ದುಗೆಗೆ ವಿಶೇಷ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 

ಅದಕ್ಕೂ ಪೂರ್ವದಲ್ಲಿ ದೋಟಿಹಾಳ ದಿಂದ ನಿಯೋಜಿತ ಉತ್ತರಾಧಿಕಾರಿ ಸಿದ್ದಲಿಂಗದೇವರು ಅವರನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಬರಮಾಡಿ ಕೊಳ್ಳಲಾಯಿತು. ಕುಂಭಹೊತ್ತ ಮಹಿಳೆಯರು, ವಿವಿಧ ಕಲಾಮೇಳದವರು,  ಗ್ರಾಮದ ಹಿರಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.