ADVERTISEMENT

ಸರ್ಕಾರಿ ಆಸ್ಪತ್ರೆ: ವೈದ್ಯರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 8:21 IST
Last Updated 23 ಮಾರ್ಚ್ 2017, 8:21 IST

ಗಂಗಾವತಿ: ಇಲ್ಲಿನ ಸರ್ಕಾರಿ ಉಪ ವಿಭಾಗದ ಆಸ್ಪತ್ರೆಯ ವೈದ್ಯರ ಮಧ್ಯೆ ಕರ್ತವ್ಯ ಮಂಗಳವಾರ ವಾಗ್ವಾದ ನಡೆಯಿತು. ನಿರ್ವಹಣೆ ಹಾಗೂ ಶಿಸ್ತಿನ ಸಂಬಂಧ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಇತರ ವೈದ್ಯರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಈಶ್ವರ ಸೌವಡಿ ಹಾಗೂ ಹಿರಿಯ ವೈದ್ಯ ಡಾ.ಜುಬೇರ್ ಅಹ್ಮದ್ ಮಧ್ಯೆ ಆಸ್ಪತ್ರೆಯ ಆವರಣದಲ್ಲಿ ವಾಗ್ವಾದ ನಡೆದಿದೆ. ಡಾ.ಜುಬೇರ್ ಅಹ್ಮದ್, ನಗರದಲ್ಲಿ ಸ್ವಂತ ಆಸ್ಪತ್ರೆ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆಗೆ ವಿಳಂಬವಾಗಿ ಬರುತ್ತಿದ್ದಾರೆ ಎಂಬ ಆರೋಪವಿದ್ದು, ಇದರಿಂದಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ವಿಚಾರಿಸುವ ಉದ್ದೇಶಕ್ಕೆ ವೈದ್ಯಾಧಿಕಾರಿ ಡಾ.ಈಶ್ವರ ಸೌವಡಿ, ತಮ್ಮ ಕಚೇರಿಗೆ ಎಲ್ಲ ವೈದ್ಯರು ಕರೆಯಿಸಿಕೊಂಡು ರೋಗಿಗಳಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದ್ದರು.

ಆಡಳಿತಾಧಿಕಾರಿಗಳ ಸಭೆಗೂ ಡಾ.ಜುಬೇರ್ ಗೈರು ಹಾಜರಾಗಿದ್ದರು. ಈ ಬಗ್ಗೆ ವಿಚಾರಿಸುವ ಉದ್ದೇಶಕ್ಕೆ ಆಡಳಿತಾಧಿಕಾರಿ ದೂರವಾಣಿ ಕರೆ ಮಾಡಿದ್ದಾರೆ. ಡಾ. ಜುಬೇರ್ ಅವರೊಂದಿಗೆ ಮಾತನಾಡಿದ್ದಾರೆ. ಇದರಿಂದ ಕುಪಿತಗೊಂಡ ಜುಬೇರ್ ಆಹ್ಮದ್, ‘ನನ್ನನ್ನು ಕೇಳಲು ನೀವು ಯಾರು, ನಿಮ್ಮ ಕೆಲಸ ನೀವು ಮಾಡಿ. ಬೇಕಿದ್ದರೆ ಮೇಲಧಿಕಾರಿಗೆ ಮಾಹಿತಿ ನೀಡಿ’ ಎಂದಿದ್ದರು ಎನ್ನಲಾಗಿದೆ.


ವೈದ್ಯರ ಈ ವಾಗ್ವಾದ ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕರು ವೀಕ್ಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ.ಈಶ್ವರ ಸೌವಡಿ, ಆಸ್ಪತ್ರೆಯ ವಸ್ತುಸ್ಥಿತಿಯನ್ನು ಮೇಲಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT