ADVERTISEMENT

ಸಾಲ ಮನ್ನಾ ಮಾಡಲು ಒತ್ತಾಯ

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘಟನೆಗಳ ಆಕ್ರೋಶ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:34 IST
Last Updated 18 ಏಪ್ರಿಲ್ 2017, 5:34 IST
ಸಾಲ ಮನ್ನಾ ಮಾಡಲು ಒತ್ತಾಯ
ಸಾಲ ಮನ್ನಾ ಮಾಡಲು ಒತ್ತಾಯ   
ಕುಷ್ಟಗಿ: ರೈತರ ಬ್ಯಾಂಕ್‌ ಸಾಲ ಮನ್ನಾ ಮಾಡಲು ಮುಂದಾಗದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ರೈತ ಸಂಘದ ಸದಸ್ಯರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.
 
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತರು ಬ್ಯಾಂಕ್‌ಗಳು ನೀಡಿದ ಸಾಲ ಮರುಪಾವತಿ ನೋಟಿಸ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
 
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್‌ಸಾಬ್‌ ಮೂಲಿಮನಿ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ ಮುಂಗಾರು ಮತ್ತು ಹಿಂಗಾರು ಬೆಳೆಗಳು ಸಂಪೂರ್ಣ ಒಣಗಿಹೋಗಿವೆ. ಭೀಕರ ಬರ ತಾಂಡವಾಡುತ್ತಿದೆ.  ಹೀಗಿದ್ದರೂ ರೈತರ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗದಿರುವುದರಿಂದ ರೈತರು ಹತಾಶರಾಗಿದ್ದಾರೆ ಎಂದರು.
 
ಪರಿಸ್ಥಿತಿ ಗಂಭೀರವಾಗಿದೆ. ಸಾಲ ವಸೂಲಿಗೆ ಮುಂದಾಗಬಾರದು ಎಂದು ಸರ್ಕಾರದ ಸೂಚನೆ ಇದ್ದರೂ ಬ್ಯಾಂಕ್‌ಗಳು ಮರುಪಾವತಿಗೆ ರೈತರಿಗೆ ನೋಟಿಸ್‌ ನೀಡಿದ್ದಲ್ಲದೆ ಆಸ್ತಿ ಜಪ್ತಿ ಮಾಡುವುದಾಗಿ ಬೆದರಿಕೆಯೊಡ್ಡುತ್ತಿವೆ. ಮುಂದೆ ನೋಟಿಸ್‌ ನೀಡಿದರೆ ಅಂಥ ಬ್ಯಾಂಕ್‌ಗಳಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸುವುದಾಗಿ ಹೇಳಿದರು.
 
ರೈತ ಸಂಘದ ಮುಖಂಡ ಮದ್ದಾನಯ್ಯ ಮಾತನಾಡಿ, ರೈತರ ಸಾಲ ಮನ್ನಾ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿರುವಂತಿದೆ ಎಂದು ಆರೋಪಿಸಿದರು. 
 
ಕೃಷ್ಣಾ ಬಿ ಸ್ಕೀಂನ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸರ್ಕಾರದ ಬದ್ಧತೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಂಡುಬರುತ್ತದೆ ಎಂದು ದೂರಿದರು. 
 
ತಹಶೀಲ್ದಾರ ಎಂ.ಗಂಗಪ್ಪ ಮನವಿ ಸ್ವೀಕರಿಸಿದರು. ನಗರ ಘಟಕದ ಅಧ್ಯಕ್ಷ ಸಂಗಪ್ಪ ಬಳ್ಳೂಡಿ, ತಾಲ್ಲೂಕು ಘಟಕದ ಅಧ್ಯಕ್ಷ ವೀರಪ್ಪ ಜೀಕೇರಿ, ಬಾಲಪ್ಪ ಆಡಿನ್, ಶರಣಯ್ಯ ಗಡಾದ, ಮುದಿಯಪ್ಪ ಗುನ್ನವರ, ರಮೇಶ  ಹೊರಪೇಟಿ, ಮಲ್ಲಪ್ಪ ಗೆಜ್ಜಲಗಟ್ಟಿ ಭಾಗವಹಿಸಿದ್ದರು.
 
ಯಲಬುರ್ಗಾ ವರದಿ: ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳು ಮೇವು, ನೀರಿಲ್ಲದೆ ಸಂಕಷ್ಟದಲ್ಲಿದ್ದರೂ ಸರ್ಕಾರ ಮಾತ್ರ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ರೈತರ ಸಾಲ ಮನ್ನಾ ಮಾಡದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ರೈತ ಮುಖಂಡ ರಸೂಲಸಾಬ ದಮ್ಮೂರ ಆರೋಪಿಸಿದರು. 
 
ಪಟ್ಟಣದಲ್ಲಿ ರೈತ ಸಂಘದ ಪದಾಧಿಕಾರಿಗಳು ವಿವಿಧ ಬೇಡಕೆ ಈಡೇರಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸತತ ಮೂರು ವರ್ಷಗಳಿಂದ ಬರಗಾಲವಿದ್ದು, ಹಿಂದೆಂದೂ ಕಾಣದ ಭೀಕರ ಸ್ಥಿತಿಯನ್ನು ಇಲ್ಲಿಯ ಜನರು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. 
 
ಪ್ರತಿ ಗ್ರಾಮದಲ್ಲಿ ಕುಡಿವ ನೀರಿನ ತೊಂದರೆ ಕಾಣಿಸಿಕೊಂಡಿದೆ. ರೈತರು ಹಾಗೂ ಕೃಷಿ ಕಾರ್ಮಿಕರು ಉದ್ಯೋಗ ವಿಲ್ಲದೆ ಗುಳೆ ಹೋಗುತ್ತಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಹಾಗೂ ಕೈಸಾಲ ಮಾಡಿದ ರೈತರು ಆತಂಕಗೊಂಡಿದ್ದಾರೆ. ಊರು ಬಿಟ್ಟು ಗುಳೆ ಹೋಗುತ್ತಿದ್ದಾರೆ. ಗೋಶಾಲೆಗಳಿಗೆ ಅಧಿಕಾರಿಗಳು ಸರಿಯಾಗಿ ನೀರು, ಮೇವು ಪೂರೈಸುತ್ತಿಲ್ಲ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. 
 
ಮುಖಂಡ ಸ.ಶರಣಪ್ಪ ಪಾಟೀಲ ಮಾತನಾಡಿ, ಸಾಲ ಮನ್ನಾ ಮಾಡುವ ವಿಷಯದಲ್ಲಿ ರಾಷ್ಟ್ರೀಯ ಪಕ್ಷದ ಮುಖಂಡರು ಕಚ್ಚಾಡುತ್ತಿರುವುದು ರೈತರಿಗೆ ನೋವುಂಟು ಮಾಡಿದೆ.

ತಮ್ಮ ವಿವಿಧ ಸೌಲಭ್ಯಗಳನ್ನು  ಹೆಚ್ಚಿಸಿಕೊಳ್ಳುವ ಜನಪ್ರತಿನಿಧಿಗಳಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂಬ ಕನಿಷ್ಠ ಸೌಜನ್ಯವಿಲ್ಲದಿರುವುದು ದುರಂತವೇ ಸರಿ ಎಂದು ಅಭಿಪ್ರಾಯಪಟ್ಟರು. 
 
ಅಧ್ಯಕ್ಷತೆ ವಹಿಸಿದ್ದ ಶರಣಯ್ಯ ಮುಳ್ಳೂರಮಠ, ತಿರುಗುಣೆಪ್ಪ ಬೆಟಗೇರಿ, ಶರಣು ಗುಮಗೇರಿ, ಶರಣಬಸಪ್ಪ ದಾನಕೈ ಹಾಜರಿದ್ದರು. ವಿವಿಧ ಗ್ರಾಮಗಳ ಸಾಕಷ್ಟು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.