ADVERTISEMENT

ಸಾಹಿತ್ಯ ಭವನಕ್ಕೆ ಕೊನೆಗೂ ಕಾಯಕಲ್ಪ

ಶರತ್‌ ಹೆಗ್ಡೆ
Published 9 ಜನವರಿ 2017, 6:32 IST
Last Updated 9 ಜನವರಿ 2017, 6:32 IST

ಕೊಪ್ಪಳ: ನಗರದ ಸಾಹಿತ್ಯ ಭವನಕ್ಕೆ ಕೊನೆಗೂ ಕಾಯಕಲ್ಪ ಸಿಕ್ಕಿದೆ.  ಹೈದರಾಬಾದ್‌– ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನಿಧಿಯಿಂದ ₹ 68 ಲಕ್ಷ ವೆಚ್ಚದಲ್ಲಿ ನವೀಕರಣ, ಅತ್ಯಾಧುನಿಕ ಧ್ವನಿ – ಬೆಳಕಿನ ವ್ಯವಸ್ಥೆ, ಪ್ರತಿಧ್ವನಿ ತಡೆಗೋಡೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಆಂಧ್ರಪ್ರದೇಶ ಮೂಲದ ಕಾರ್ಮಿಕರು ನವೀಕರಣ ಕಾಮಗಾರಿಯಲ್ಲಿ ತೊಡಗಿದ್ದಾರೆ. ಇದೇ ರೀತಿಯಲ್ಲಿ ಕಾಮಗಾರಿ ನಡೆದರೆ ಒಂದೆರಡು ತಿಂಗಳೊಳಗೆ ಭವನ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳಬಹುದು ಎಂಬುದು ನಗರದ ನಾಗರಿಕರ ನಿರೀಕ್ಷೆ.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಇತ್ತೀಚೆಗೆ ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಶಾಸಕರ ಅನುದಾನದಲ್ಲಿ ಭವನಕ್ಕೆ ಆವರಣ ಗೋಡೆ ನಿರ್ಮಿಸುವ ಭರವಸೆಯನ್ನೂ ನೀಡಿದ್ದಾರೆ.

ಆದರೆ ಇಷ್ಟೆಲ್ಲ ವೆಚ್ಚದಲ್ಲಿ ನವೀಕರಣಗೊಳಿಸುವ ಭವನವನ್ನು ನಿರ್ವಹಿಸುವವರು ಯಾರು ಎಂಬ ಪ್ರಶ್ನೆಗೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಭವನದೊಳಗಿರುವ 4 ಕೊಠಡಿಗಳನ್ನು ಸಜ್ಜುಗೊಳಿಸಿ ಒಂದರಲ್ಲಿ ಆಡಳಿತ ಕಚೇರಿ ಸ್ಥಾಪಿಸಬೇಕು. ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸಬೇಕು ಎಂಬುದು ಇಲ್ಲಿನ ಹಿರಿಯ ಸಾಹಿತಿಗಳ ಒತ್ತಾಯ.

‘ಸುಮಾರು ಒಂದು ವರ್ಷದ ಹಿಂದೆ ಭವನವನ್ನು ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಅರೆಬರೆಯಾಗಿ ನವೀಕರಣಗೊಳಿಸಲಾಗಿತ್ತು. ಈಗ ಅದನ್ನೆಲ್ಲಾ ಕಿತ್ತುಹಾಕಿ ಸಂಪೂರ್ಣವಾಗಿ ಹೊಸ ಪರಿಕರಗಳನ್ನು ಅಳವಡಿಸಲಾಗುತ್ತಿದೆ. ಆದರೆ, ವ್ಯವಸ್ಥೆ ಮೊದಲೇ ವಿವೇಚಿಸಿದ್ದರೆ ಆ ಅನಗತ್ಯ ವೆಚ್ಚ ಹಾಗೂ ಹಣ ಪೋಲಾಗುವುದನ್ನು ತಡೆಯಬಹುದಿತ್ತು. ಆ ಹಣವನ್ನು ಈ ಬಾರಿ ಬಳಸಿ ಪೂರ್ಣ ಪ್ರಮಾಣದಲ್ಲಿ ಆಧುನೀಕರಿಸಬಹುದಿತ್ತು. ಆಸನ ವ್ಯವಸ್ಥೆಯನ್ನೂ ಹೊಸದಾಗಿ ಮಾಡಬಹುದಿತ್ತು’ ಎನ್ನುತ್ತಾರೆ ನಗರದ ಹಿರಿಯ ನಾಗರಿಕ ಗೋವಿಂದರಾವ್‌ ಕುಲಕರ್ಣಿ.

ಶೌಚಾಲಯ ಯಥಾಸ್ಥಿತಿ: ಇಡೀ ಭವನ ಆಧುನೀಕರಣಗೊಳ್ಳುತ್ತಿದ್ದರೂ ಶೌಚಾಲಯ ಮತ್ತು ನೀರು ಪೂರೈಕೆ ವ್ಯವಸ್ಥೆ ಅಸಮರ್ಪಕವಾಗಿವೆ. ಅವುಗಳ ದುರಸ್ತಿಗೆ ಪ್ರತ್ಯೇಕ ಹಣ ಬಿಡುಗಡೆ ಆಗಬೇಕು ಎಂಬುದು ಅಧಿಕಾರಿಗಳ ಹೇಳಿಕೆ. ಒಟ್ಟಿನಲ್ಲಿ ಆಧುನೀಕರಣಗೊಂಡರೂ ತನ್ನ ಹಳೆಯ ಅವ್ಯವಸ್ಥೆಯ ಕುರುಹುಗಳನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಈ ಭವನದ್ದು ಎಂಬುದು ಕನ್ನಡಪರ ಹೋರಾಟಗಾರರ ಕಳವಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.