ADVERTISEMENT

ಸುಗಮ ಚುನವಾಣೆಗೆ ಮತಗಟ್ಟೆ ಅಧಿಕಾರಿಗಳು ಶ್ರಮಿಸಿ

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:43 IST
Last Updated 23 ಏಪ್ರಿಲ್ 2018, 10:43 IST

ಕೊಪ್ಪಳ: ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಗೊಂದಲ ರಹಿತವಾಗಿ ಹಾಗೂ ಸುಗಮವಾಗಿ ನಡೆಸಲು ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ವಿಧಾನಸಭೆ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ತರಬೇತಿಯಲ್ಲಿ ಅವರು ಮಾತನಾಡಿದರು.

ಮತದಾನ ಕಾರ್ಯ ಸುಗಮ ವಾಗಿ ನಡೆಸಲು ಈ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಮತಗಟ್ಟೆ ಯಲ್ಲಿದ್ದುಕೊಂಡು, ಮತದಾರರಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲು, ಮತಗಟ್ಟೆ ಅಧಿಕಾರಿಗಳು ಆಯೋಗದ ನಿಯಮಗಳನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕಿದೆ. ಹೀಗಾಗಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಖುದ್ದು ತಾವೇ ತರಬೇತಿ ನೀಡುವುದರ ಜತೆಗೆ, ಅಧಿಕಾರಿಗಳ ಗೊಂದಲ, ಪ್ರಶ್ನೆ ಅಥವಾ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗಲಿದೆ ಎಂದರು.

ADVERTISEMENT

ಮತಗಟ್ಟೆಗಳಲ್ಲಿ ಯಾವುದೇ ಪಕ್ಷ ಅಥವಾ ಚಿಹ್ನೆಗಳ ಛಾಯಾಚಿತ್ರವಿದ್ದಲ್ಲಿ ಅದನ್ನು ಮರೆಮಾಚಬೇಕು. ಪೋಲಿಂಗ್ ಏಜೆಂಟರ ಕಾರ್ಯ ಪರಿಶೀಲಿಸಬೇಕು. ಬೆಳಿಗ್ಗೆ 6ಕ್ಕೆ ಸರಿಯಾಗಿ ಅಣಕು ಮತದಾನ ಪ್ರಕ್ರಿಯೆ ಅರಂಭಿಸಬೇಕು.  ಚುನಾವಣೆಯನ್ನು ಮುಕ್ತ ಮತ್ತು ನಿಸ್ಪಕ್ಷಪಾತ ರೀತಿಯಲ್ಲಿ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಮತಗಟ್ಟೆಯಲ್ಲಿ ಮತದಾನದ ಬಗ್ಗೆ ಸರಿಯಾಗಿ ದಾಖಲೆ ನಿರ್ವಹಿಸಬೇಕು. ನಕಲಿ ಮತದಾರರು ಮತ ಚಲಾವಣೆಗೆ ಯತ್ನಿಸುವ ಸಾಧ್ಯತೆಗಳಿದ್ದು, ಈ ಕುರಿತು ನಿಗಾ ವಹಿಸಿ, ಮತದಾರರನ್ನು ಗುರುತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಧರು ಅಥವಾ ದುರ್ಬಲರು ಮತಗಟ್ಟೆಗೆ ಬಂದಾಗ, ಅವರು ಮತ ಚಲಾಯಿಸಲು ನಿಯಮಾನುಸಾರ ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಸಂಜೆ 6ಕ್ಕೆ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ, ನಿಯಮಗಳಿಗೆ ಅನುಗುಣವಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಒಟ್ಟಾರೆ ಮತಗಟ್ಟೆಯಲ್ಲಿ ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುಗಮವಾಗಿ ಹಾಗೂ ನ್ಯಾಯ ಸಮ್ಮತವಾಗಿ ಮತದಾನ ಪ್ರಕ್ರಿಯೆ ಜರುಗಿಸಬೇಕು ಎಂದರು.

ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಸಹಾಯಕ ಚುನಾವಣಾಧಿಕಾರಿ ಗುರುಬಸವರಾಜ ಇದ್ದರು.

**
ಮತಗಟ್ಟೆಯೊಳಗೆ ಯಾವುದೇ ಮತದಾರ ಅಥವಾ ಸಿಬ್ಬಂದಿ ಮೊಬೈಲ್ ಫೋನ್ ತರುವಂತಿಲ್ಲ. ಇದರ ಬಗ್ಗೆ ನಿಗಾ ವಹಿಸಬೇಕು. ಮತಗಟ್ಟೆ ಬಳಿ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು
– ಎಂ.ಕನಗವಲ್ಲಿ, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.