ADVERTISEMENT

ಸೃಜನಶೀಲ ಮನಸ್ಸಿನ ‘ಸ್ಮಾರ್ಟ್’ ಚಿತ್ರಗಳು

ಶರತ್‌ ಹೆಗ್ಡೆ
Published 21 ಮೇ 2017, 6:34 IST
Last Updated 21 ಮೇ 2017, 6:34 IST
ಬಡಿಗೇರ ಅವರು ಸ್ಮಾರ್ಟ್‌ಫೋನ್‌ನಲ್ಲಿ ತೆಗೆದ ಚಿತ್ರಗಳು
ಬಡಿಗೇರ ಅವರು ಸ್ಮಾರ್ಟ್‌ಫೋನ್‌ನಲ್ಲಿ ತೆಗೆದ ಚಿತ್ರಗಳು   

ಕೊಪ್ಪಳ: ಸ್ಥಿರ ಛಾಯಾಗ್ರಹಣ ಕ್ಯಾಮೆರಾದಲ್ಲಿ ಸೃಜನಶೀಲ ಚಿತ್ರ ತೆಗೆಯುವುದೇ ಸವಾಲು. ಅಂಥದ್ದರಲ್ಲಿ ಸಾಮಾನ್ಯ ಸ್ಮಾರ್ಟ್‌ಫೋನ್‌ ಬಳಸಿ ಸೃಜನಶೀಲ ಚಿತ್ರಗಳನ್ನು ತೆಗೆದು ಜನ ಮೆಚ್ಚುಗೆ ಗಳಿಸಿದ್ದಾರೆ ಈರಣ್ಣ ಬಡಿಗೇರ.

ಹುಬ್ಬಳ್ಳಿಯವರಾದ ಈರಣ್ಣ ಅವರು ಕೊಪ್ಪಳದಲ್ಲಿ ಸುದ್ದಿವಾಹಿನಿ ಛಾಯಾಗ್ರಾಹಕ. ಆದರೆ, ಸ್ಥಿರ ಚಿತ್ರಣದತ್ತ ಅವರ ಆಸಕ್ತಿ. ಆದರೆ, ಕ್ಯಾಮೆರಾ ವೆಚ್ಚ ದುಬಾರಿ ಎಂದು ಸುಮ್ಮನಿದ್ದಾರೆ.

‘ಬೆಂಗಳೂರಿನ ನ್ಯಾಷನಲ್‌ ಅಕಾಡೆಮಿ ಆಫ್‌ ಸಿನೆಮಾ ಅಂಡ್‌ ಟೆಲಿವಿಷನ್‌ ಸಂಸ್ಥೆಯಲ್ಲಿ ವಿಡಿಯೋಗ್ರಫಿ ಕುರಿತ ಡಿಪ್ಲೊಮಾ ಕೋರ್ಸ್‌ ಅಧ್ಯಯನ ಮಾಡಿದೆ. ಸಹಜವಾಗಿ ಅದೇ ಕ್ಷೇತ್ರದಲ್ಲಿ ವೃತ್ತಿಗೆ ತೊಡಗಿದೆ. ಕ್ಯಾಮೆರಾ ನನಗೆ ಅನ್ನ ಕೊಟ್ಟಿದೆ. ಹಾಗೆಂದು ಆಸಕ್ತಿಯನ್ನು ಸುಮ್ಮನೆ ಬಿಟ್ಟುಬಿಡಲಾಗಲಿಲ್ಲ’ ಎಂದು ಈರಣ್ಣ ಮನಸ್ಸು ಬಿಚ್ಚಿದರು.

ADVERTISEMENT

‘ಯಾವುದೇ ವಸ್ತು, ವಿಷಯ ಸಿಕ್ಕಿದರೂ ಚಿತ್ರೀಕರಿಸುವುದು ನನ್ನ ಹವ್ಯಾಸ. ಅದನ್ನೇ ಮುಂದುವರಿಸಿದ್ದೇನೆ. ಸಾಮಾನ್ಯ ಸ್ಮಾರ್ಟ್‌ಫೋನನ್ನೇ ಸೃಜನಶೀಲವಾಗಿ ಹೇಗೆ ಬಳಸಬಹುದು ಎಂಬುದನ್ನು ಕಂಡುಕೊಂಡಿದ್ದೇನೆ. ಈ ಫೋನ್‌ನಲ್ಲಿ ಯಾವುದೇ ವಿಶೇಷ ಆ್ಯಪ್‌ಗಳು ಇಲ್ಲ’ ಎಂದು ತಮ್ಮ ಚಿತ್ರಗಳ ಗುಟ್ಟು ತೆರೆದಿಟ್ಟರು.

‘ವಸ್ತುವಿನ ಆಯ್ಕೆ, ಬೆಳಕು, ಸನ್ನಿವೇಶ ಸರಿಯಿದ್ದಾಗ ಇಂಥ ಚಿತ್ರ ತೆಗೆಯಬಹುದು. ಛಾಯಾಗ್ರಾಹಕನಿಗೆ ತಾಳ್ಮೆ ಬೇಕು. ಒಂದು ದಿನ ಉತ್ತಮ ಕ್ಯಾಮೆರಾ ಕೊಂಡು ಸ್ಥಿರ ಛಾಯಾಗ್ರಾಹಕನಾಗುವ ಕನಸು ಇದೆ’ ಎಂದರು ಈರಣ್ಣ.

ಬೆಳಕಿಗೆ ಬಂದ ಚಿತ್ರಗಳು: ‘ಇಬ್ಬನಿ, ಸೂರ್ಯ ಬಿಂಬದ ಎದುರು ತೊಟ್ಟಿಕ್ಕುವ ನೀರು, ನಿಸರ್ಗ ಚಿತ್ರಗಳು ಕ್ಯಾಮೆರಾ ಫೋನಿನಲ್ಲಿ ಸೆರೆಯಾಗಿವೆ. ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದೇನೆ. ಇಲ್ಲಿ ಸ್ಮಾರ್ಟ್‌ಫೋನ್‌ ಛಾಯಾಗ್ರಾಹಕರದ್ದೇ ವೇದಿಕೆಗಳಿವೆ.

ಇಲ್ಲಿಯೂ ಸ್ಪರ್ಧೆಗಳು ನಡೆಯುತ್ತಿವೆ. ಇಲ್ಲಿಯೂ ವೃತ್ತಿಪರ ಛಾಯಾಗ್ರಾಹಕರೇ ಮುನ್ನೆಲೆಯಲ್ಲಿದ್ದಾರೆ.  ಆದರೂ ಆ ವೇದಿಕೆಗಳನ್ನು ಬಳಸಲು ಪ್ರಯತ್ನಿಸುತ್ತಿದ್ದೇನೆ. ಮಾಧ್ಯಮ ಕ್ಷೇತ್ರದಲ್ಲೇ ಇರುವುದರಿಂದ ಚಿತ್ರಗಳಿಗೂ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಒಳ್ಳೆಯ ವಿಡಿಯೊಗಳನ್ನೂ ಚಿತ್ರಿಸಿದ್ದೇನೆ. ಒಮ್ಮೊಮ್ಮೆ ನನ್ನ ಸಂಸ್ಥೆ ಬಳಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದೆ’ ಎನ್ನುತ್ತಾರೆ ಈರಣ್ಣ. ಮಾಹಿತಿಗೆ ಮೊ. 7019682625.

* *

ಅಂತರ್ಜಾಲದ ವೇದಿಕೆಗಳಲ್ಲಿ ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಇದೆ. ಇನ್ನಷ್ಟು ಪಕ್ವಗೊಂಡು ಛಾಯಾಗ್ರಹಣದಲ್ಲಿ ಮುಂದುವರಿಯುವ ಆಸೆ ಇದೆ.
ಈರಣ್ಣ ಬಡಿಗೇರ,  ಸುದ್ದಿವಾಹಿನಿ ಛಾಯಾಗ್ರಾಹಕ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.