ADVERTISEMENT

ಹನುಮಸಾಗರ: ಕೊಯ್ಯುವವರಿಲ್ಲ; ಎಳನೀರಿಗೆ ಬರ

​ಪ್ರಜಾವಾಣಿ ವಾರ್ತೆ
Published 5 ಮೇ 2016, 10:55 IST
Last Updated 5 ಮೇ 2016, 10:55 IST
ಹನುಮಸಾಗರದ ಸುತ್ತಮುತ್ತಲಿನ ತೋಟಗಳಲ್ಲಿರುವ ಜವಾರಿ ತೆಂಗಿನ ಮರದಲ್ಲಿ ಎಳನೀರಿನ ಕಾಯಿಗಳಿವೆ. ಆದರೆ ಮರ ಏರುವವರಿಗೆ ತೀವ್ರ ಬರ ಇದೆ
ಹನುಮಸಾಗರದ ಸುತ್ತಮುತ್ತಲಿನ ತೋಟಗಳಲ್ಲಿರುವ ಜವಾರಿ ತೆಂಗಿನ ಮರದಲ್ಲಿ ಎಳನೀರಿನ ಕಾಯಿಗಳಿವೆ. ಆದರೆ ಮರ ಏರುವವರಿಗೆ ತೀವ್ರ ಬರ ಇದೆ   

ಹನುಮಸಾಗರ:  ಬೇಸಿಗೆ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಎಳನೀರಿನ ಬೇಡಿಕೆ ಹೆಚ್ಚಾಗಿದ್ದರೆ ಆವಕ ಮಾತ್ರ ಕಡಿಮೆಯಾಗಿದ್ದು, ಅದರಲ್ಲೂ ಉತ್ತಮ ಗುಣಮಟ್ಟದ ಕಾಯಿಗಳು ಮಾರುಕಟ್ಟೆಯಲ್ಲಿ ಕಂಡು ಬರುವುದು ಅಪರೂಪವಾದಂತಾಗಿದೆ.

ಈ ಭಾಗದ ಹನುಮಸಾಗರ, ಮಾವಿನಇಟಗಿ, ಮಡಿಕ್ಕೇರಿ, ಯಲಬುಣಚಿ ಗ್ರಾಮಗಳ ತೋಟಗಳಲ್ಲಿ ಎತ್ತರೆತ್ತರವಾದ ಜವಾರಿ ತೆಂಗಿನಮರಗಳು ಇದ್ದು ಅವುಗಳಲ್ಲಿ ಸಾಕಷ್ಟು ಎಳನೀರಿನ ಇಳುವರಿ ಇದೆ.

ಈ ಸಮಯದಲ್ಲಿ ಎಳ ನೀರಿನ ಕಾಯಿಗಳಿಗೆ ಉತ್ತಮ ಬೇಡಿಕೆ, ಬೆಲೆ ಹೊಂದಿದದ್ದರೂ ಮರ ಏರಿ ಕಾಯಿ ಇಳಿಸಲು ಮಾತ್ರ ಯಾರೂ ಸಿಗುತ್ತಿಲ್ಲದ ಕಾರಣ ತೋಟದ ಮಾಲೀಕರು ಪರದಾಡುವಂತಾಗಿದೆ.

‘ನಮ್ಮ ತೋಟದಲ್ಲಿ 60 ತೆಂಗಿನ ಮರಗಳಿವೆ, ಎರಡು ವರ್ಷಗಳಿಂದ ಅವುಗಳನ್ನು ಏರಿ ಇಳಿಸುವವರು ಸಿಗುತ್ತಿಲ್ಲ, ಕಾಯಿ ಬಲಿತು ಉದುರಿದ ನಂತರ ಅಡುಗೆಗಾಗಿ ಉಪಯೋಗಿಸುವಂತಾಗಿದೆ. ಈ ಕಾರಣಕ್ಕಾಗಿ 50–50 ಆಧಾರದಲ್ಲಿ ವ್ಯಾಪಾರಸ್ಥರೊಂದಿಗೆ ವ್ಯವಹಾರ ಮಾಡಿಕೊಂಡಿದ್ದೇವೆ,  ವ್ಯಾಪಾರಸ್ಥರೇ ಬಂದು ಇಳಿಸಕೊಂಡು ಹೋಗಬೇಕು, ಒಂದಕ್ಕೆ ₹12 ರಂತೆ ನೀಡುತ್ತೇವೆ, ಅವರು ₹25 ರಿಂದ 30 ರಂತೆ ಗ್ರಾಹಕರಿಗೆ ನೀಡುತ್ತಾರೆ. ಇದು ನಮಗೆ ಅನಿವಾರ್ಯವಾಗಿದೆ ಎಂದು ತೋಟದ ಮಾಲೀಕರಾದ ಹನುಮಸಾಗರದ ಸುರೇಶ ಜಮಖಂಡಿಕರ ಹೇಳುತ್ತಾರೆ.

ಎತ್ತರವಾಗಿರುವ ಮರಗಳನ್ನು ಏರಲು ಕೂಲಿಗಳು ಹಿಂದು ಮುಂದು ನೋಡುತ್ತಾರೆ, ಈ ಹಿಂದೆ ದಿನದ ಕೂಲಿಯಂತೆ ನೀಡಿ ಆಳುಗಳನ್ನು ಕಷ್ಟಪಟ್ಟು ಹುಡುಕಿ ಕರೆ ತರುತ್ತಿದ್ದರು. ಆದರೆ ಈಗ ತಲಾಕಾಯಿಗೆ ₹2 ರಂತೆ ನೀಡಬೇಕಾಗಿದೆ, ದಿನಕ್ಕೆ 200 ರಿಂದ 250 ಕಾಯಿಗಳನ್ನು ಇಳಿಸುತ್ತಾರೆ.

ಗ್ರಾಹಕರು ಉತ್ತಮ ಗುಣಮಟ್ಟದ ಎಳ ನೀರಿನ ಕಾಯಿಗಳು ಮಾರುಕಟ್ಟೆಗೆ ಬರುತ್ತಿಲ್ಲದ ಕಾರಣ ಸಾದಾ ಎಳನೀರಿನ ಕಾಯಿಗಳನ್ನು ₹30 ಕೊಟ್ಟು ಖರೀದಿಸುವಂತಾಗಿದೆ. ವ್ಯಾಪಾರಸ್ಥರು ಧಾವಂತದಲ್ಲಿ ಸಣ್ಣ ಕಾಯಿಗಳನ್ನು ಕಿತ್ತು ತರುತ್ತಿರುವುದರಿಂದ ಎಳನೀರಿನ ಕಾಯಿಗಳು ತಾಜಾತನ ಕಳೆದುಕೊಳ್ಳುತ್ತಿವೆ ಎನ್ನಲಾಗುತ್ತಿದೆ. ಕಾಯಿ ಸಿಗುವುದೇ ದುಸ್ತರವಾಗಿದೆ, ಮುಂಗಡ ಹಣ ಕೊಟ್ಟು  ಕಾಯ್ದಿರಿಸಿದರೂ ತೋಟಗಳ ಮಾಲೀಕರು ಎಳನೀರು ಕೊಡಲು ಹಿಂದು ಮುಂದು ನೋಡುತ್ತಾರೆ, ಇಂತಹ ಸಂದರ್ಭದಲ್ಲಿ ನಮಗೆ ದೊರೆತ ಎಳನೀರುಗಳೇ ಬದುಕಿಗೆ ಆಧಾರ ಎಂದು ವ್ಯಾಪಾರಸ್ಥ ಆದಮ್‌ ಬದಾಮಿ ಹೇಳುತ್ತಾರೆ.

ಈ ಮೊದಲು ತಿಪಟೂರು, ಶಿವಮೊಗ್ಗ, ದಾವಣಗೆರೆ ಮುಂತಾದೆಡೆಗಳಿಂದ ಎಳನೀರಿನ ಕಾಯಿಗಳನ್ನು ತರಿಸಲಾಗುತ್ತಿತ್ತು, ಆದರೆ ಸಾಗಾಣಿಕ ವೆಚ್ಚ ಹೆಚ್ಚಾಗುತ್ತಿದೆ. ಈ ಬಾರಿ ಅಲ್ಲೂ ಎಳನೀರಿನ ಕೊರತೆ ಇರುವ ಕಾರಣ ನಮ್ಮ ಸಮಯಕ್ಕೆ ಸಿಗುತ್ತಿಲ್ಲ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎಳನೀರು ಕಡಿಮೆ ಪ್ರಮಾಣದಲ್ಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.