ADVERTISEMENT

ಹರೇಕೃಷ್ಣ ಮೆಟಾಲಿಕ್ಸ್‌ ಕಾರ್ಮಿಕರ ಪ್ರತಿಭಟನೆ

ಕೊಪ್ಪಳ: ಕೆಲಸದಿಂದ ತೆಗೆದುಹಾಕಿರುವುದಕ್ಕೆ ಕಾರ್ಮಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 7:17 IST
Last Updated 2 ಫೆಬ್ರುವರಿ 2017, 7:17 IST
ಕೊಪ್ಪಳ ತಾಲ್ಲೂಕು ಹಿರೇಬಗನಾಳ ಗ್ರಾಮದ ಹರೇಕೃಷ್ಣ ಮೆಟಾಲಿಕ್ಸ್ ಕಂಪೆನಿ ಮುಂದೆ ಬುಧವಾರ ಕಾರ್ಮಿಕರು ಧರಣಿ ನಡೆಸಿದರು
ಕೊಪ್ಪಳ ತಾಲ್ಲೂಕು ಹಿರೇಬಗನಾಳ ಗ್ರಾಮದ ಹರೇಕೃಷ್ಣ ಮೆಟಾಲಿಕ್ಸ್ ಕಂಪೆನಿ ಮುಂದೆ ಬುಧವಾರ ಕಾರ್ಮಿಕರು ಧರಣಿ ನಡೆಸಿದರು   
ಕೊಪ್ಪಳ: ತಾಲ್ಲೂಕಿನ ಹಿರೇಬಗನಾಳ್‌ನ ಹರೇಕೃಷ್ಣ ಮೆಟಾಲಿಕ್ಸ್‌ನ ನೂರಕ್ಕೂ ಹೆಚ್ಚು ಕಾರ್ಮಿಕರನ್ನು ಏಕಾಏಕಿ ಕೆಲಸ ದಿಂದ ತೆಗೆದು ಹಾಕಿರುವ ಕ್ರಮ ಖಂಡಿಸಿ ಕಾರ್ಮಿಕರು ಬುಧವಾರ ಕಾರ್ಖಾನೆ ಮುಂಭಾಗ ಧರಣಿ ನಡೆಸಿದರು. 
 
ಕಾರ್ಖಾನೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಪಾಲಿಸದ ದೂರಿನ ಮೇಲೆ ಕೊಪ್ಪಳ ತಹಶೀಲ್ದಾರ್‌ ಅವರು ಕಾರ್ಖಾನೆಗೆ ಬೀಗ ಜಡಿದಿದ್ದರು. ಈ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆಯೇ ಕಾರ್ಮಿಕರನ್ನು ತೆಗೆದುಹಾಕಲಾಗಿದೆ. ಯಾವ ಮುನ್ಸೂಚನೆ ಇಲ್ಲದೇ ಹೀಗೆ ಮಾಡಿರುವುದರಿಂದ ನಮ್ಮ ಕುಟುಂಬಗಳು ಅತಂತ್ರವಾಗಿವೆ ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದರು.
 
ಕಾರ್ಮಿಕರನ್ನು ಉದ್ಯೋಗದಿಂದ ಕಡಿತಗೊಳಿಸಿರುವ ಅವಧಿಯಲ್ಲಿ ಮೂಲವೇತನದ ಅರ್ಧದಷ್ಟು ವೇತನ ನೀಡುವುದಾಗಿ ಕಂಪೆನಿ ಹೇಳಿದೆ. ಅದು ಪ್ರತಿ ತಿಂಗಳು ಅಲ್ಲ. ಕಾರ್ಖಾನೆ ಪುನರಾರಂಭದ ಬಳಿಕ ಅರ್ಧಾಂಶ ವೇತನ ನೀಡುವ ಭರವಸೆ ನೀಡಿದೆ. ಅದುವರೆಗೆ ನಾವು ಜೀವನ ಸಾಗಿ ಸುವುದು ಹೇಗೆ ಎಂದು ಕಾರ್ಮಿಕರು ಪ್ರಶ್ನಿಸಿದರು. 
 
ಸ್ಥಳೀಯ ಕಾರ್ಮಿಕರನ್ನು ಬಿಟ್ಟು ಹೊರರಾಜ್ಯದ ಕಾರ್ಮಿಕರನ್ನು ಇಲ್ಲಿ ವ್ಯವಸ್ಥಿತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಕಾರ್ಖಾನೆಯಲ್ಲಿ ಕೆಲಸ ಮುಂದು ವರಿದಿದೆ. ಆದರೆ, ನಮ್ಮನ್ನು ಮಾತ್ರ ತೆಗೆದುಹಾಕಲಾಗಿದೆ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.
 
ಕೆಲಸದಿಂದ ತೆಗೆಯುವ ಮೊದಲು ಒಂದು ತಿಂಗಳ ಮೊದಲು ನೋಟಿಸ್‌ ಕೊಡಬೇಕಿತ್ತು. ಇದ್ದಕ್ಕಿದ್ದಂತೆಯೇ ತೆಗೆದುಹಾಕಿದರೆ ಏನು ಮಾಡಲಿ. ಕಂಪೆನಿ ತೊಂದರೆಯಲ್ಲಿದ್ದರೆ ಕಾರ್ಮಿಕ ರೊಂದಿಗೆ ಚರ್ಚಿಸಿ ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ಹತ್ತಾರು ವರ್ಷಗಳಿಂದ ದುಡಿದ ನಮ್ಮನ್ನು ಈ ರೀತಿ ನಡೆಸಿ ಕೊಂಡಿರುವುದು ಸರಿಯಲ್ಲ ಎಂದು ಕಾರ್ಮಿಕರು ದೂರಿದರು.
 
ಕಂಪೆನಿ ಸ್ಪಷ್ಟನೆ: ಕಂಪೆನಿಗೆ ಜಿಲ್ಲಾಡಳಿತ ಬೀಗಮುದ್ರೆ ಹಾಕಿದೆ. ಆದ್ದರಿಂದ ಕಂಪೆನಿಯಲ್ಲಿ ಯಾವುದೇ ಉತ್ಪಾದನಾ ಚಟುವಟಿಕೆ ನಡೆಯುತ್ತಿಲ್ಲ. ಕಾರ್ಖಾನೆ ಆವರಣದೊಳಗಿರುವ ವಿದ್ಯುತ್‌ ಸ್ಥಾವರ, ಯಂತ್ರೋಪಕರಣಗಳ ನಿರ್ವಹಣೆ ನಡೆಯುತ್ತಿದೆ. ಕಾರ್ಖಾನೆ ಆವರಣಕ್ಕೆ ಗಾಳಿ ತಡೆಗೋಡೆ ನಿರ್ಮಾಣ ನಡೆದಿದೆ. ಸುಮಾರು ಒಂದೂವರೆ ತಿಂಗಳೊಳಗೆ ಆ ಕಾಮಗಾರಿ ಮುಗಿಯಲಿದೆ. ಆ ಬಳಿಕ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿ ಕೊಳ್ಳುತ್ತೇವೆ.  ಅದುವರೆಗೆ ಕಾರ್ಮಿಕ ರಿ ಗೂ ಕೆಲಸ ಇಲ್ಲ. ಅದಕ್ಕಾಗಿ ಅನಿ ವಾ ರ್ಯವಾಗಿ ಅವರನ್ನು ತಾತ್ಕಾಲಿ ಕವಾಗಿ ತೆಗೆ ದುಹಾಕಿದ್ದೇವೆ ಎಂದು ಕಂಪೆನಿಯ ಅಧ್ಯಕ್ಷ ಸಂಜಯ್‌ ಮಾಲ್ಪಾನಿ ಹೇಳಿದರು.
 
**
ದೂರವಾಣಿ ಮೂಲಕ ನಾಳೆಯಿಂದ ಬರುವುದು ಬೇಡ ಎಂದು ಹೇಳಿದ್ದಾರೆ. ಏಕಾಏಕಿ ಹೇಳಿ ಯಾವ ಆಧಾರದ ಮೇಲೆ ನಮ್ಮನ್ನು ತೆಗೆದುಯುತ್ತಿದ್ದಾರೋ ತಿಳಿಯದಾಗಿದೆ
-ನಾಗರಾಜ,ಕಾರ್ಮಿಕ, ಹರೇಕೃಷ್ಣ ಮೆಟಾಲಿಕ್ಸ್‌ ಕಂಪೆನಿ ಹಿರೇಬಗನಾಳ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.