ADVERTISEMENT

ಹಿರೇಅರಳಿಹಳ್ಳಿ: ಅಂತರ್ಜಲ ಬರಿದು

ನೀರು ನಿರ್ವಹಣೆ ಅರಾಜಕತೆ; ಜಿಲ್ಲಾಡಳಿತದ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 6:50 IST
Last Updated 7 ಮಾರ್ಚ್ 2017, 6:50 IST
ಕುಷ್ಟಗಿ: ರಾಜ್ಯದ ಎಲ್ಲೆಡೆ ಈಗ ಅಂತರ್ಜಲ ಕೊರತೆ, ಬತ್ತಿದ ಕೊಳವೆಬಾವಿ, ನೀರಿಗಾಗಿ ಜನ ಜಾನುವಾರುಗಳ ಹಾಹಾಕಾರ ಇವುಗಳದ್ದೇ ಮಾತು. ಆದರೆ ಪಟ್ಟಣದ ಪಕ್ಕದಲ್ಲಿರುವ ಹಿರೇಅರಳಿಹಳ್ಳಿ (ಯಲಬುರ್ಗಾ ತಾಲ್ಲೂಕು) ಗ್ರಾಮದಲ್ಲಿ ನೀರಿದ್ದರೂ ಜನರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾರ ಪ್ರಮಾಣದಲ್ಲಿ ಪೋಲಾಗಿ ಬೇಸಿಗೆಯಲ್ಲೂ ಹಳ್ಳದ ರೂಪದಲ್ಲಿ ಹರಿಯುತ್ತಿರುವುದು ಕಂಡುಬಂದಿದೆ.
 
ಇದೇ ಗ್ರಾಮದ ಕೆಲವೆಡೆ ನೀರಿಗೆ ಜನರು ಪರದಾಡುತ್ತಿದ್ದರೆ ಉಳಿದ ಕಡೆ ನೀರು ಬೇಕಾಬಿಟ್ಟಿಯಾಗಿ ತಿಪ್ಪೆಗುಂಡಿ ಸೇರುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಬರುವುದೇ ಇಲ್ಲ. ಸಿಬ್ಬಂದಿ ಮೇಲೆ ಯಾರ ಹಿಡಿತವೂ ಇಲ್ಲ. ನೀರುಗಂಟಿಗಳ ಮಾತು ಯಾರೂ ಕೇಳುತ್ತಿಲ್ಲ ಅದರಿಂದ ನೀರು ಖಾಲಿಯಾಗಿ ಹರಿದು ಅಂತರ್ಜಲ ಬರಿದಾಗುತ್ತಿದೆ ಎಂದು ಗ್ರಾಮದ ಮಲ್ಲಪ್ಪ, ಹನುಮಗೌಡ ಇತರರು ಹೇಳಿದರು.
 
ಮೂರು ಓವರ್‌ಹೆಡ್‌ ಟ್ಯಾಂಕ್‌ಗಳು ಇದ್ದು ಪ್ರಾಥಮಿಕ ಶಾಲೆ ಮತ್ತು ಊರ ಹಿಂದಿನ ಟ್ಯಾಂಕ್‌ಗಳಿಗೆ ಯಥೇಚ್ಛ ನೀರು ಹರಿದುಬರುತ್ತಿರುತ್ತದೆ. ವಿದ್ಯುತ್‌ ಹೋದಾಗಲೇ ಕೊಳವೆಬಾವಿಗಳು ಬಂದ್‌ ಆಗುತ್ತವೆ. ಹಾಗಾಗಿ ಅಲ್ಲಿಯವರೆಗೂ ಟ್ಯಾಂಕ್‌ ಮೇಲಿನಿಂದ ನೀರು ತುಂಬಿ ಸದಾ ಹರಿಯುತ್ತಿರುತ್ತದೆ. ನೀರುಗಂಟಿಗಳು ಮೋಟರ್‌ಪಂಪ್‌ಗಳನ್ನು ಬಂದ್‌ ಮಾಡುವುದಿಲ್ಲ ಎಂದು ಜನ ದೂರಿದರು.
 
ಪೋಲು ಹೇಗೆ?:  
ಬೆಳಿಗ್ಗೆ ಸುಮಾರು ಎರಡು ಮೂರು ತಾಸು ನೀರು ಪೂರೈಕೆಯಾಗುತ್ತಿದ್ದು ಅರ್ಧಗಂಟೆ ನಂತರ ಕೆಲ ಭಾಗಗಳಲ್ಲಿ ಯಾರೂ ನೀರು ಕೇಳುವವರಿರುವುದಿಲ್ಲ. ಎಲ್ಲವೂ ಅನಧಿಕೃತ ಸಂಪರ್ಕ ಒಂದಕ್ಕೂ ನಲ್ಲಿ (ಟ್ಯಾಪ್‌) ಇಲ್ಲ. ಹಾಗಾಗಿ ನೀರುಗಂಟಿ ಬಂದ್‌ ಮಾಡುವವರೆಗೂ ನೀರು ರಭಸದಿಂದ ಹರಿಯುವುದು ದಿನಿನಿತ್ಯದ ಸಂಗತಿ. 
 
ಬೆಳಿಗ್ಗೆ ಬಯಲುಬಹಿರ್ದೆಸೆಗೆ ಹೋಗಿ ಬರುವವರು ಚಪ್ಪಲಿ ಸಮೇತ ತೊಳೆಯುವುದು ಇದೇ ನೀರಿನಲ್ಲಿ, ಮಕ್ಕಳು ಮಲ ವಿಸರ್ಜನೆ ಮಾಡಿದ ನಂತರ ಕೆಲ ಮಹಿಳೆಯರು ನಲ್ಲಿ ಬಳಿ ಕರೆತಂದು ತೊಳೆಯುತ್ತಾರೆ. 
 
ಪಾತ್ರೆ, ಹಾಸಿಗೆ, ಹೊದಿಕೆಗಳನ್ನು ನೇರವಾಗಿ ನಲ್ಲಿಬಳಿ ತೊಳೆಯುವುದು. ಇನ್ನೂ ಕೆಲವರು ಪೈಪ್‌ಗಳ ಮೂಲಕ ಜಾನುವಾರು, ಟಂ ಟಂ, ದ್ವಿಚಕ್ರವಾಹನ ತೊಳೆಯುವುದು ಇದೇ ನೀರಿನಲ್ಲಿ. ನೀರು ಸಾಕಾದರೂ ನಲ್ಲಿ ಇಲ್ಲದ ಕಾರಣ ನೀರು ಪೋಲಾಗುತ್ತಿರುತ್ತದೆ ಎಂದು ಜನ ವಿವರಿಸಿದರು.
 
ಅಧಿಕಾರಿಗಳ ನಿರ್ಲಕ್ಷ್ಯ: ನೀರಿನ ವಿಷಯದಲ್ಲಿ ಅರಾಜಕತೆ ಬಗ್ಗೆ ಕಳೆದ ಒಂದು ವರ್ಷದಿಂದಲೂ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್‌ ಇಲಾಖೆ ಪ್ರಧಾನಕಾರ್ಯದರ್ಶಿವರೆಗೂ ಹಂತಹಂತವಾಗಿ ಪತ್ರವ್ಯವಹಾರ ನಡೆಸಲಾಗಿದೆ.
 
ಆದರೆ ಒಬ್ಬರೂ ಇದರ ಬಗ್ಗೆ ಕಾಳಜಿ ವಹಿಸಿಲ್ಲ. ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರ ಗಮನಕ್ಕೆ ತಂದರೆ ಅವರೂ ಉದಾಸೀನ ಮಾಡಿದರು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
 
ಗ್ರಾಮದಲ್ಲೆಲ್ಲ ಆಳವಾದ ಗುಂಡಿ ತೆಗೆದು ಮುಖ್ಯಕೊಳವೆಗಳ ಮೂಲಕ ಅನಧಿಕೃತವಾಗಿ ಸಂಪರ್ಕ ಪಡೆಯಲಾಗುತ್ತಿದೆ, ಈ ಬಗ್ಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಗ್ರಾಮದ ಹಿರಿಯರು ಹೇಳಿದರು. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಿದರೂ ಮಾತನಾಡಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.