ADVERTISEMENT

ಹುಲಿಕೆರೆ ಬಯಲುಶೌಚ ಮುಕ್ತಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 7:09 IST
Last Updated 11 ಸೆಪ್ಟೆಂಬರ್ 2017, 7:09 IST
ಕೊಪ್ಪಳದ ಹುಲಿಕೆರೆ ಉದ್ಯಾನದಲ್ಲಿ ಗಣೇಶ ವಿಗ್ರಹಗಳು ವಿಸರ್ಜನೆಯಾದ ಸ್ಥಳ
ಕೊಪ್ಪಳದ ಹುಲಿಕೆರೆ ಉದ್ಯಾನದಲ್ಲಿ ಗಣೇಶ ವಿಗ್ರಹಗಳು ವಿಸರ್ಜನೆಯಾದ ಸ್ಥಳ   

ಕೊಪ್ಪಳ: ನಗರದ ಹುಲಿಕೆರೆಯನ್ನು ಬಯಲು ಶೌಚದಿಂದ ಮುಕ್ತಗೊಳಿಸ ಬೇಕಿದೆ. ಸುಂದರ ಪ್ರಾಕೃತಿಕ, ಜೀವವೈವಿಧ್ಯದ ತಾಣವಾಗಿರುವ ಹುಲಿಕೆರೆ ಬಯಲು ಮಲ ವಿಸರ್ಜನೆಯ ಕಾರಣದಿಂದಾಗಿ ನಿತ್ಯ ಕಲುಷಿತಗೊಳ್ಳುತ್ತಿದೆ.

ಇಡೀ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಮತ್ತು ಬಳಕೆಯಲ್ಲಿ ಸಮ ರೋಪಾದಿ ಕಾರ್ಯಕ್ರಮಗಳು ನಡೆ ಯುತ್ತಿವೆ. ಆದರೆ, ಜಿಲ್ಲಾ ಕೇಂದ್ರದ ಜನ ಇದೇ ನೀರಿನಲ್ಲಿ ಸ್ನಾನ ಮಾಡುವುದು, ಜಾನುವಾರು, ಬಟ್ಟೆ ತೊಳೆಯುವುದು ಮಾಡುತ್ತಿದ್ದಾರೆ. ಜೀವಜಲದ ತಾಣ ರೋಗವಾಹಕ ಕೇಂದ್ರವಾಗುತ್ತಿರುವುದು ಆತಂಕಕಾರಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಆತಂಕ ವ್ಯಕ್ತಪಡಿಸಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಹುಲಿಕೆರೆ ಉದ್ಯಾನವೂ ಕೂಡಾ ಶಿಥಿಲಾ ವಸ್ಥೆಯಲ್ಲಿದೆ. ಪುಂಡ ಪೋಕರಿಗಳ, ಕುಡುಕರ ತಾಣವಾಗುತ್ತಿದೆ. ಮಕ್ಕಳು, ಮಹಿಳೆಯರು ಓಡಾಡುವ ವೇಳೆಯಲ್ಲಿಯೇ ಇಲ್ಲಿ ಹಲವರು ಬಯಲು ಮಲವಿಸರ್ಜನೆಯಲ್ಲಿ ತೊಡಗಿರುವುದು ಅಸಹ್ಯಕಾರಿ ವಿಚಾರ ಎಂದು ಹಿರಿಯ ನಾಗರಿಕ ಗೋವಿಂದರಾವ್‌ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.

ADVERTISEMENT

ನಗರಸಭೆ ವತಿಯಿಂದ ಇತ್ತೀಚೆಗಷ್ಟೆ ಕೆರೆಯಿಂದ ಅಲ್ಪ ಪ್ರಮಾಣದಲ್ಲಿ ಹೂಳು ತೆಗೆಯಲಾಗಿದೆ. ಆದರೆ, ಮತ್ತೆ ಹೂಳು ವಾಪಸ್‌ ಕೆರೆಗೆ ಹರಿಯುವ ಸಾಧ್ಯತೆ ಇದೆ. ಇದಕ್ಕೆ ತಡೆಗೋಡೆ ನಿರ್ಮಿಸಬೇಕು ಎಂದೂ ಸ್ಥಳೀಯರು ಒತ್ತಾಯಿಸಿದ್ದಾರೆ.

ಗಣೇಶ ಅವಶೇಷ ತೆಗೆಯಲು ಮನವಿ ಕೆರೆಯ ಒಂದು ಪಾರ್ಶ್ವದಲ್ಲಿ ಇತ್ತೀಚೆಗೆ ನಗರದ ಎಲ್ಲ ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಗಿದೆ. ಬಹುತೇಕ ವಿಗ್ರಹಗಳು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಮಾಡಿದವು. ಅವು ಕರಗುವುದೂ ಇಲ್ಲ. ಬಳಸಿದ ರಾಸಾಯನಿಕ ಬಣ್ಣಗಳು ನೀರಿನಲ್ಲಿ ಸೇರಿ ಜಲಚರಗಳಿಗೆ ಕುತ್ತು ತರುವ ಅಪಾಯವಿದೆ. ಆದ್ದರಿಂದ ಈ ಅವಶೇಷಗಳನ್ನು ಕೆರೆಯಿಂದ ಎತ್ತಿ ಬೇರೆಡೆ ಹಾಕಬೇಕು. ಕೆರೆ ಶುದ್ಧೀಕರಣ ಪ್ರಕ್ರಿಯೇ ಕೂಡಲೇ ಆರಂಭವಾಗಬೇಕು ಎಂಬುದು ಪರಿಸರವಾದಿಗಳ ಧ್ವನಿ.

ಗಣೇಶ ಹಬ್ಬದಲ್ಲಿ ಬಳಸಿದ ಪ್ಲಾಸ್ಟಿಕ್‌ನ ಅಲಂಕಾರಿಕ ವಸ್ತುಗಳು ಕೆರೆಯಲ್ಲಿ ತೇಲುತ್ತಿವೆ. ಇವುಗಳನ್ನೂ ತೆಗೆದು ಸ್ವಚ್ಛಗೊಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಹುಲಿಕೆರೆಯ ನೀರನ್ನು ಹಾಗೇ ಕುಡಿಯಲು ಯೋಗ್ಯವಾಗುವ ರೀತಿಯಲ್ಲಿ ಸಂಗ್ರಹಿಸಬೇಕು. ಇಲ್ಲಿ ನಗರಸಭೆ ಜತೆ ಹಾಗೂ ಸಾರ್ವಜನಿಕರ ವೈಯಕ್ತಿಕ ಕಾಳಜಿ ಮುಖ್ಯ ಎನ್ನುತ್ತಾರೆ ನಗರಸಭೆಯ ಪರಿಸರ ವಿಭಾಗದ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.