ADVERTISEMENT

ಹೈಟೆಕ್ ಆಗದ ತ್ಯಾಜ್ಯ ವಿಲೇವಾರಿ ಘಟಕ

ಹಸಿ-– ಒಣ ಕಸ ವಿಂಗಡಣೆ ಕಾರ್ಯ; ನಗರದಲ್ಲಿ ಪರಿಣಾಮಕಾರಿಯಾಗದ ಯತ್ನ

ಡಾ.ಸಿದ್ದನಗೌಡ ಪಾಟೀಲ
Published 5 ಜೂನ್ 2018, 11:10 IST
Last Updated 5 ಜೂನ್ 2018, 11:10 IST
ಕೊಪ್ಪಳ ಹೊರವಲಯದ ಹಿರೇಸಿಂದೋಗಿ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕ
ಕೊಪ್ಪಳ ಹೊರವಲಯದ ಹಿರೇಸಿಂದೋಗಿ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕ   

ಕೊಪ್ಪಳ: ನಗರದ 31 ವಾರ್ಡ್‌ಗಳಲ್ಲಿ ಕಸ ವಿಲೇವಾರಿಗೆ ಸ್ವಚ್ಛತಾ ಕಾರ್ಮಿಕರು, ವಾಹನ, ಜಾಗೃತಿ ಎಲ್ಲವೂ ಇದೆ. ಆದರೆ ಕಸ ಮಾತ್ರ ಸಾರ್ವತ್ರಿಕ ಸಮಸ್ಯೆಯಾಗಿ ಕಾಡುತ್ತಿದೆ.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ನಾಗರಿಕರಲ್ಲಿ ತಿಳಿವಳಿಕೆ ಕೊರತೆಯಿಂದ ರಸ್ತೆಗೆ ಕಸ ಚೆಲ್ಲುತ್ತಾರೆ ಎಂದು ಹೇಳಿದರೆ, ನಗರಸಭೆ ಸಿಬ್ಬಂದಿ ನಿಯಮಿತವಾಗಿ ಕಸ ವಿಲೇವಾರಿ ಮಾಡದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ. ನಾವು ತೆರಿಗೆ ಕಟ್ಟುವುದು ತಡವಾದರೆ ವಸೂಲಿಗೆ ಬರುತ್ತಾರೆ. ಆದರೆ ಸ್ವಚ್ಛತೆ ಮಾಡಿ ಎಂದರೆ ಸ್ಪಂದಿಸುವುದೇ ಕಡಿಮೆ ಎಂದು ಜನ ಹೇಳುತ್ತಾರೆ.

'ಪರಿಸರ ದಿನದಂದು ಯುದ್ಧೋಪಾದಿಯಲ್ಲಿ ಜಾಗೃತಿ ಕಾರ್ಯಕ್ರಮ ಮಾಡುವ ಸರ್ಕಾರಿ ಇಲಾಖೆಗಳು ನಂತರ ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ಸುಮ್ಮನೆ ಇದ್ದುಬಿಡುತ್ತಿರುವುದರಿಂದ ನಗರವೇ ಒಂದು ಕಸದ ತೊಟ್ಟಿ ರೀತಿಯಲ್ಲಿ ಭಾಸವಾಗುತ್ತದೆ' ಎನ್ನುತ್ತಾರೆ ವೀರ ಕನ್ನಡಗ ಸಂಘಟನೆಯ ಶಿವಾನಂದ ಹೊದ್ಲೂರ.

ADVERTISEMENT

ಹೆಸರಿಗಷ್ಟೇ ತ್ಯಾಜ್ಯ ವಿಲೇವಾರಿ ಘಟಕ: ನಗರದಲ್ಲಿ ಸುಮಾರು 80 ಸಾವಿರ ಜನಸಂಖ್ಯೆ ಇದೆ. ನಿತ್ಯ 6 ಟನ್ ಕಸ ಸಂಗ್ರಹವಾಗುತ್ತದೆ. ಎಲ್ಲ ಕಸವನ್ನು ಎತ್ತಿಕೊಂಡು ನಗರದ ಹೊರವಲಯದ ಹಿರೇಸಿಂದೋಗಿ ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಾರೆ. ಅಲ್ಲಿ ಹಸಿ, ಒಣ ಎಂದು ಕಸವನ್ನು ವಿಂಗಡಿಸಿ, ಪರ್ಯಾಯ ಕೆಲಸಕ್ಕೆ ಬಳಸಲಾಗುತ್ತದೆ.

ಆದರೆ, ವಿಲೇವಾರ ಘಟಕ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲಿರುವ ಕಸವನ್ನು ಗೊಬ್ಬರವನ್ನಾಗಿ ಮಾಡಿ, ತಾರಸಿ ತೋಟಕ್ಕೆ, ಹೊಲಗಳಿಗೆ ನೀಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಕೊಂಡು ಬಳಸಿದ್ದನ್ನು ಮಾತ್ರ ಯಾರೂ ಹೇಳಲಿಲ್ಲ. ಕಸ ಸಂಸ್ಕರಣೆಗೆ ಲಕ್ಷಾಂತರ ವೆಚ್ಚದಲ್ಲಿ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಬಳಕೆ ಮಾತ್ರ ಆಗುತ್ತಿಲ್ಲ.

ನಗರಸಭೆಯ ಕೆಲವು ಅಧಿಕಾರಿಗಳು ಆಸಕ್ತಿವಹಿಸಿ ಭೂತದಂತೆ ಕಾಡುತ್ತಿರುವ ಕಸವನ್ನು ನಿರ್ಮೂಲನೆ ಮಾಡಲು ಈ ಘಟಕದಲ್ಲಿ ವಿವಿಧ ಬಗೆಯ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಅವು ಯಾವವೂ ಕಾರ್ಯರೂಪಕ್ಕೆ ಬಂದಿಲ್ಲ. ಇಚ್ಛಾಶಕ್ತಿಯ ಕೊರತೆಯಿಂದ ಕಸದರಾಶಿ ಬೆಟ್ಟದಂತೆ ಬೆಳೆಯುತ್ತಿರುವುದು ಮಾತ್ರ ತಪ್ಪುತ್ತಿಲ್ಲ.

ಬೆಂಕಿ- ಹೊಗೆ: ಘಟಕದ ಸುತ್ತಮುತ್ತ ಉಳಿದ ಪ್ಲಾಸ್ಟಿಕ್ ಹಾಗೂ ಕಾಗದಗಳಿಗೆ ಬೆಂಕಿಯನ್ನು ಹೆಚ್ಚುವುದರಿಂದ ಹೊಗೆ ಮುಗಿಲೆತ್ತರಕ್ಕೆ ಏರುತ್ತದೆ. ಕೆಲವು ಮನೆಗಳ ಬೂದಿಯಲ್ಲಿ ಉಳಿದಿರುವ ಕೆಂಡದಿಂದ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂದು ಪರಿಸರ ಇಲಾಖೆ ಅಧಿಕಾರಿ ಅಶೋಕಕುಮಾರ ಸಜ್ಜನ ಹೇಳುತ್ತಾರೆ.

ಹೊಗೆಯಿಂದ ಪರಿಸರ ಇನ್ನಷ್ಟು ಕಲ್ಮಶಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ವಿಶೇಷ ಆಸಕ್ತಿ ವಹಿಸಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸುಸಜ್ಜಿತವಾಗಿ ನಿರ್ವಹಿಸಬೇಕಾದ ಜವಾಬ್ದಾರಿ ಇದೆ. ಕಾಟಾಚಾರಕ್ಕೆ ಘಟಕ ಸ್ಥಾಪಿಸಿದರೆ ನೈರ್ಮಲ್ಯ ಕಾಪಾಡುವುದು ಸಾಧ್ಯವಿಲ್ಲದ ಮಾತು. ಮತ್ತೆ ಪರಿಸರ ದಿನ ಬಂದಿದೆ. ಇಂದಿನಿಂದ ಶುದ್ಧ ಗಾಳಿ, ಪರಿಸರ ನಗರಕ್ಕೆ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಶ್ರಮಿಸಲಿದೆಯೇ ಕಾದು ನೋಡಬೇಕಿದೆ.

**
ಕೊಪ್ಪಳ ಬೆಳೆಯುತ್ತಿರುವ ನಗರವಾಗಿದ್ದು, ಕಸ ವಿಲೇವಾರಿ ಸೇರಿದಂತೆ ಮೂಲಸೌಕರ್ಯಗಳತ್ತ ಗಮನ ಹರಿಸಿದರೆ ಶೀಘ್ರ ಸುಂದರ ನಗರವಾಗುವುದರಲ್ಲಿ ಸಂಶಯವಿಲ್ಲ
ವೀರೇಶ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.