ADVERTISEMENT

‘ಹೈ-ಕ ಪ್ರದೇಶ ಸಾಹಿತ್ಯ, ಸಂಸ್ಕೃತಿಯಲ್ಲಿ ಶ್ರೀಮಂತ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 6:56 IST
Last Updated 23 ಸೆಪ್ಟೆಂಬರ್ 2017, 6:56 IST

ಯಲಬುರ್ಗಾ: ಹೈದರಾಬಾದ್ ಕರ್ನಾಟಕ ಪ್ರದೇಶ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗೆ ವಿಶೇಷ ಸ್ಥಾನಮಾನ ಹೊಂದಿದೆ. ಆದರೆ ಸೂಕ್ತ ಗೌರವ, ಪ್ರೋತ್ಸಾಹ ಹಾಗೂ ಪ್ರಚಾರ ಸಿಗುತ್ತಿಲ್ಲ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ್ ಅಂಗಡಿ ಹೇಳಿದರು.

ಸ್ಥಳೀಯ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಹಾಗೂ ನಗರ ಘಟಕದಿಂದ ನಡೆದ ಹೈದರಾಬಾದ್‌ ಕರ್ನಾಟಕ ವಿಮೋಚನೆ-70 ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವುದು ಒಪ್ಪಿಕೊಂಡಂತೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಇತರ ಪ್ರಾಂತ್ಯಕ್ಕೆ ಹೋಲಿಕೆ ಮಾಡಿದರೆ ಶ್ರೀಮಂತಿಕೆ ಎದ್ದುಕಾಣುತ್ತಿದೆ. ಸಮಗ್ರ ಅಭಿವೃದ್ಧಿಗೆ ಲಭ್ಯವಾದ 371(ಜೆ) ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು ಹೆಚ್ಚು ಸಕ್ರಿಯರಾಗಬೇಕಾಗಿದೆ.

ADVERTISEMENT

ಈ ಬಗ್ಗೆ ಪರಿಷತ್ ನಿರಂತರ ಹೋರಾಟಕ್ಕೆ ಬದ್ಧವಾಗಿದೆ. 371(ಜೆ) ಪ್ರಮಾಣ ಪತ್ರ ಪಡೆಯಲುಬೇಕಾದ ದಾಖಲಾತಿಗಳು, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಚಿಂತಕ ಶಿವಕುಮಾರ್ ಕುಕನೂರು ಹೈಕ ವಿಮೋಚನೆ ಯಶೋಗಾಥೆಯ ಕುರಿತ ವಿಶೇಷ ಉಪನ್ಯಾಸ ನೀಡಿದರು. ಶಾರದ ಸಂಗೀತ ಪಾಠ ಶಾಲೆಯ ಕಲಾವಿದೆ ಅನ್ನಪೂರ್ಣ ಮನ್ನಾಪುರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಕಸಾಪ ತಾಲ್ಲೂಕಾಧ್ಯಕ್ಷ ಲಕ್ಷ್ಮಣ ಹಿರೇಮನಿ ಉಪ್ಪಾರ ಅಧ್ಯಕ್ಷತೆ ವಹಿಸಿಸಿದ್ದರು. ಜಿಲ್ಲಾ ಪ್ರತಿನಿಧಿ ಫಕೀರಪ್ಪ ವಾಲ್ಮೀಕಿ, ನೌಕರ ಸಂಘದ ಅಧ್ಯಕ್ಷ ವೈ.ಜಿ.ಪಾಟೀಲ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಮರ್ದಾನ್‌ಸಾಬ್ ಕೊತ್ವಾಲ್, ಕಾಲೇಜಿನ ಪ್ರಾಚಾರ್ಯ ಅಂದಪ್ಪ ಬಂಡಿಹಾಳ, ಶಾಲೆಯ ಮುಖ್ಯಶಿಕ್ಷಕ ಎಸ್.ಡಿ.ಅಪ್ಪಾಜಿ, ಸಂಗಣ್ಣ ಟೆಂಗಿನಕಾಯಿ, ಶರಣಬಸಪ್ಪ ದಾನಕೈ, ಶಿಕ್ಷಕ ಬಾಲದಂಡಪ್ಪ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.