ADVERTISEMENT

2 ಸಾವಿರ ಮಕ್ಕಳಿಂದ ನದಿ ಉಳಿಸಿ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 7:16 IST
Last Updated 13 ಸೆಪ್ಟೆಂಬರ್ 2017, 7:16 IST

ಗಂಗಾವತಿ: ಅಧ್ಯಾತ್ಮ ಗುರು ವಾಸುದೇವ ಜಗ್ಗಿ ನೇತೃತ್ವದ ಈಶಾ ಫೌಂಡೇಷನ್‌ನ ‘ನದಿ ಉಳಿಸಿ ಸಾಮಾಜಿಕ ಆಂದೋಲನ’ಕ್ಕೆ ನಗರದ ಬೇಥೆಲ್ ಆಂಗ್ಲ ಮಾಧ್ಯಮ ಶಾಲೆಯ ಎರಡು ಸಾವಿರ ಮಕ್ಕಳು ಜಾಗೃತಿ ಜಾಥಾ ನಡೆಸಿ ಬೆಂಬಲ ಸೂಚಿಸಿದರು.

ಗುಡ್ ಶೆಫರ್ಡ್‌ ಶಿಕ್ಷಣ ಸಂಸ್ಥೆಯ ಬೇಥೆಲ್ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ನದಿ ಉಳಿಸುವ ಅಗತ್ಯತೆಯ ಬಗ್ಗೆ ಜನಜಾಗೃತಿ ಮೂಡಿಸಿದರು.

ಮಕ್ಕಳ ಬೃಹತ್ ಜಾಥಾಕ್ಕೆ ಶಾಲಾ ಆವರಣದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಹೇಮಾ ಸುಧಾಕರ ಹಾಗೂ ಸುಮಿತ್ರಾ ಸುಧಾಕರ, ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಮಕ್ಕಳು ಮೆರವಣಿಗೆ ನಡೆಸಿದರು.

ADVERTISEMENT

ಮಹಾತ್ಮಗಾಂಧಿ ವೃತ್ತದಲ್ಲಿ ಭಾರತದ ನಕಾಶೆಯ ವಿನ್ಯಾಸದಲ್ಲಿ ಸೇರಿ ಮಕ್ಕಳು ಜನರ ಗಮನ ಸೆಳೆದರು. ಈ ಬಗ್ಗೆ ಮಾತನಾಡಿದ ಶಾಲೆಯ ಮುಖ್ಯಗುರು ‘ಮನೋಜ ಹಿರೇಮಠ, ಮನುಕುಲದ ಅಳಿವು-ಉಳಿವು ನದಿಗಳನ್ನು ಅವಲಂಬಿಸಿದ್ದು, ಸಂರಕ್ಷಣೆ ಅಗತ್ಯವಿದೆ.

ದೇಶದ ಶೇ 80ರಷ್ಟು ನದಿಗಳು ಅಪಾಯದ ಅಂಚಿನಲ್ಲಿವೆ. ಇವುಗಳನ್ನು ಸಂರಕ್ಷಿಸದೇ ಹೋದರೆ ಮನುಕುಲ ನಾಶದ ಹಾದಿ ಹಿಡಿಯುತ್ತದೆ. ಈ ಹಿಂದೆ ವರ್ಷದುದ್ದಕ್ಕೂ ಪ್ರವಾಹಿಸುತ್ತಿದ್ದ ನದಿಗಳ ಪೈಕಿ ಶೇ 90ರಷ್ಟು ನದಿಗಳು ಬರಿದಾಗುತ್ತಿರುವುದು ಎಚ್ಚರಿಕೆಯ ಗಂಟೆ’ ಎಂದು ಹೇಳಿದರು.

ಶ್ರೀಕೃಷ್ಣ ದೇವರಾಯ ವೃತ್ತದಲ್ಲೂ ಕೆಲಕಾಲ ನದಿ ಉಳಿಸುವ ಬಗ್ಗೆ ಮಕ್ಕಳು ಫಲಕ ಪ್ರದರ್ಶಿಸಿದರು. ಪ್ರಮುಖರಾದ ರಾಜು ಬೆಜಲಿಯನ್ ಜೋಸೆಫ್, ಬ್ಯಾಬೇಜ್ ಮಿಲ್ಟನ್, ಕರುಣಾಕರ ಹೂಗಾರ, ಮಧುಸೂದನ, ಲಕ್ಷ್ಮಿ, ಮಂಜುಳಾ, ಚಂದ್ರಕಾಂತ ರಾವ್, ತಿಪ್ಪೇಸ್ವಾಮಿ, ಶಿಲ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.