ADVERTISEMENT

21ರಂದು ಬಜೆಟ್‌ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:05 IST
Last Updated 12 ಜನವರಿ 2017, 11:05 IST

ಕಾರಟಗಿ: ಪಟ್ಟಣದ ಪುರಸಭೆಯ 2017–18ರ ಸಾಲಿನ ಆಯವ್ಯಯ ತಯಾರಿಸಬೇಕಾಗಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ಪಟ್ಟಣದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳು, ಸರ್ಕಾರದ ಅನುದಾನದ ಸದ್ಬಳಕೆ, ಆದಾಯದ ಕ್ರೋಢೀಕರಣದ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಪುರಸಭೆಯ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗಂಗಾವತಿ ಚನ್ನಬಸವ ತಾತನವರ ಜಾತ್ರೆಯ ನಿಮಿತ್ತ ಸಭೆಯಲ್ಲಿಯ ಹಾಜರಾತಿ ಕಡಿಮೆ ಇರುವುದರಿಂದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ಎರಡನೇ ಸಭೆಯನ್ನು ಜ. 21ರಂದು ನಡೆಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು, ಸಂಘ, ಸಂಸ್ಥೆಯವರು ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ಸಲ್ಲಿಸಬಹುದು ಎಂದರು.

ಪುರಸಭೆ ಸ್ಥಾಯಿ ಸಮಿತಿ ಸದಸ್ಯ ಜಿ. ತಿಮ್ಮನಗೌಡ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ ಮಾತನಾಡಿ, ಸ್ಥಳೀಯ ಸಂಪನ್ಮೂಲದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸದಲ್ಲಿ ವ್ಯರ್ಥವಾಗಿ ಪೋಲಾಗುವುದನ್ನು ತಡೆಗಟ್ಟಬೇಕು. ನಾಗರಿಕರಿಗೆ ಕುಡಿವ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳನ್ನು ಒದಗಿಸಲು ಪ್ರಥಮಾದ್ಯತೆ ನೀಡಬೇಕು ಎಂದು ಹೇಳಿದರು.

ಉದ್ಯಮಿ ಕೆ. ಸಣ್ಣಸೂಗಪ್ಪ ಮಾತನಾಡಿ, ವಾಣಿಜ್ಯ ಪಟ್ಟಣ ನಿಯೋಜಿತ ತಾಲ್ಲೂಕು ಕೇಂದ್ರವಾಗಿದೆ. ಪುರಸಭೆ ಸದಸ್ಯರೆಲ್ಲರೂ ಅಭಿವೃದ್ಧಿಯಲ್ಲಿ ಒಮ್ಮತದಿಂದ ಇರಬೇಕು. ರಾಜಕೀಯ ದೂರವಿಟ್ಟು ಕೆಲಸ ಮಾಡಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಅನ್ನಪೂರ್ಣಮ್ಮ ಬೂದಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಹಾದೇವಿ ಭಜಂತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.