ADVERTISEMENT

30ರ ಒಳಗೆ ಹಳೆ ವಿದ್ಯಾರ್ಥಿ ಸಂಘ ರಚಿಸಿ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 7:06 IST
Last Updated 13 ಜುಲೈ 2017, 7:06 IST
30ರ ಒಳಗೆ ಹಳೆ ವಿದ್ಯಾರ್ಥಿ ಸಂಘ ರಚಿಸಿ
30ರ ಒಳಗೆ ಹಳೆ ವಿದ್ಯಾರ್ಥಿ ಸಂಘ ರಚಿಸಿ   

ಕೊಪ್ಪಳ: ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ಜುಲೈ 30ರ ಒಳಗಾಗಿ ರಚಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿ ಯಬಾರದು. ಜಿಲ್ಲೆಯಲ್ಲಿ 155 ಸರ್ಕಾರಿ ಪ್ರೌಢಶಾಲೆಗಳು ಹಾಗೂ 962 ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸಾಧನೆ ಮಾಡಿದವರನ್ನು ಆಯಾ ಶಾಲೆಗೆ ಕರೆಸಿ ವಿದ್ಯಾರ್ಥಿ ಗಳೊಂದಿಗೆ ಬೆರೆಯುವಂತೆ ಮಾಡ ಬೇಕು. ಅವರ ಸಾಧನೆಯ ವಿವರ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು. ಅಂಥ ಸಾಧಕರು ತಾವು ಓದಿದ ಶಾಲೆಗಳನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ನೆರವಾಗಬೇಕು ಎಂದು ಕೋರಿದರು.

ಶಾಲೆಗಳ ಸೌಲಭ್ಯ ಉತ್ತಮಪಡಿಸಿ:  ಸರ್ಕಾರ ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಸರ್ಕಾರದ ಕಾಳಜಿಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿ ಎರಡು ತಿಂಗಳ ಒಳಗಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಯಾಗ ಬೇಕು. ಎಲ್ಲ ಶಾಲೆಗಳಿಗೆ ಆವರಣ, ಕಿರು ಉದ್ಯಾನ, ಗ್ರಂಥಾಲಯ ನಿರ್ಮಾಣ, ಶೈಕ್ಷಣಿಕ ಸಾಮಗ್ರಿ ವಿತರಣೆ ಸಕಾಲದಲ್ಲಿ ಆಗಬೇಕು ಎಂದರು.

ಜಿಲ್ಲೆಯಲ್ಲಿ 341 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಾಗಿ ಶಿಕ್ಷಣ ಇಲಾಖೆ ವರದಿ ನೀಡಿದೆ. ಆದರೆ ವಾಸ್ತವವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಗಳಿವೆ. ಯಾವುದೇ ಮಗು ಶಾಲೆಯಿಂದ ಹೊರಗುಳಿದರೆ, ಆ ಮಗುವಿಗೆ ಅಧಿಕಾರಿಗಳು ಅನ್ಯಾಯ ವೆಸಗಿದಂತೆ ಆಗಲಿದೆ ಎಂದರು.  

ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ ಸಿಇಒ ವೆಂಕಟರಾಜಾ,  ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀದೇವಿ   ಇದ್ದರು.

***

ಅಧಿಕಾರಿಗಳಿಗೆ ಸರ್ಕಾರಿ, ಮಕ್ಕಳಿಗೆ ಖಾಸಗಿ ಶಾಲೆ
ಸಭೆಯಲ್ಲಿದ್ದ ಎಷ್ಟು ಅಧಿಕಾರಿ ಗಳು ಸರ್ಕಾರಿ ಶಾಲೆಯಲ್ಲಿ ಓದಿದ್ದೀರಿ? ಎಂದು ಕೃಪಾ ಆಳ್ವ ಅವರು ಕೇಳಿದ ಪ್ರಶ್ನೆಗೆ ಶೇ 80 ಕ್ಕಿಂತ ಹೆಚ್ಚು ಅಧಿಕಾರಿಗಳು ಕೈ ಎತ್ತಿದರು.

ನಂತರ, ಇಲ್ಲಿನ ಎಷ್ಟು ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸು ತ್ತಿದ್ದೀರಿ ಎಂಬ ಪ್ರಶ್ನೆಗೆ ಕೇವಲ ಬೆರಳೆಣಿಕೆಯಷ್ಟು ಮಂದಿ ಕೈ ಎತ್ತಿದರು.  ಇದಕ್ಕೆ ಪ್ರತಿಕ್ರಿಯಿಸಿದ ಕೃಪಾ, ಸರ್ಕಾರಿ ಶಾಲೆಗಳಲ್ಲಿ ಓದಿ, ನೀವೆಲ್ಲಾ ಈಗ ಅಧಿಕಾರಿ ಗಳಾಗಿದ್ದೀರಿ.  ಅಂತಹ ಶಾಲೆಗಳ ಶಿಕ್ಷಣದ ಮೇಲೆ ನಿಮಗೆ ನಂಬಿಕೆ ಇಲ್ಲವೆ? ಸರ್ಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ನಿಮಗೆ ಅನಿಸಬೇಕಲ್ಲವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.