ADVERTISEMENT

ಮೆರುಗು ತುಂಬಿದ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 7:00 IST
Last Updated 2 ಜನವರಿ 2018, 7:00 IST

ಕೊಪ್ಪಳ: ನಗರದ ಗವಿಮಠ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವ ಸೋಮವಾರ ನಡೆಯಿತು. ಪ್ರತಿ ಸೋಮವಾರ ಸಹಜವಾಗಿ ಭಕ್ತರ ದಟ್ಟಣೆ ಹೆಚ್ಚು ಇರುತ್ತದೆ. ಅದರಂತೆಯೇ ಇಂದೂ ಕೂಡಾ ದಟ್ಟಣೆ ಹೆಚ್ಚು ಇತ್ತು.

ಸಂಜೆ ವೇಳೆ ನಗರದಲ್ಲಿ ಗವಿಸಿದ್ದೇಶ್ವರ ಲಘು ರಥೋತ್ಸವದ ಮೂರ್ತಿ ಮತ್ತು ರಥೋತ್ಸವದ ಕಳಸದ ಮೆರವಣಿಗೆ ನಡೆಯಿತು. ಉತ್ಸವಮೂರ್ತಿ ಮಂಗಳಾಪುರದಿಂದ ಆಗಮಿಸಿದೆ. ಕಳಸವು ಹಲಗೇರಿ ಗೌಡರ ಮನೆಯಿಂದ ಆಗಮಿಸಿದೆ. ನಗರದ ಬನ್ನಿಕಟ್ಟೆಯಲ್ಲಿ ಸೇರಿದ ಕಳಸ, ಮೂರ್ತಿ ಹೊಂದಿದ್ದ ಅಲಂಕೃತ ಟ್ರ್ಯಾಕ್ಟರ್‌ಗಳು ಸಾಲಾಗಿ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದವು. ಭಕ್ತರ ಕುಣಿತ ಮೆರವಣಿಗೆಗೆ ಕಳೆ ನೀಡಿತು.

ರಸ್ತೆಯ ಅಕ್ಕಪಕ್ಕ ನಿಂತ ಸಾರ್ವಜನಿಕರು ಹಾದಿಯುದ್ದಕ್ಕೂ ನೀರು ಸುರಿದು ಸ್ವಚ್ಛಗೊಳಿಸಿ ಮೆರವಣಿಗೆ ಸಾಗಲು ಅನುವು ಮಾಡಿಕೊಟ್ಟರು. ಭಜನೆ ತಂಡ, ಜಾಂಜ್‌ ಮೇಳ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಠಕ್ಕೆ ರೊಟ್ಟಿ, ಧಾನ್ಯಗಳ ದೇಣಿಗೆ ಎಂದಿನಂತೆ ಮುಂದುವರಿದಿದೆ.

ADVERTISEMENT

ಮದ್ಯ ನಿಷೇಧ: ಜಾತ್ರೆ ಪ್ರಯುಕ್ತ ಜ. 2 ಮಧ್ಯರಾತ್ರಿಯಿಂದ ಜ. 4ರಂದು ಬೆಳಿಗ್ಗೆ 5ರ ವರೆಗೆ ನಗರ ಹಾಗೂ ಸುತ್ತಮುತ್ತಲಿನ 5 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಮದ್ಯಪಾನ, ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.

ಗವಿಸಿದ್ದೇಶ್ವರ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 'ಗವಿಮಠದ ಜಾತ್ರೆ ಸಾಮಾನ್ಯ ಜಾತ್ರೆಯಾಗಿ ಉಳಿದಿಲ್ಲ. ಧಾರ್ಮಿಕ, ಆಧ್ಯಾತ್ಮಿಕ ಮಾತ್ರವಲ್ಲದೇ ಬಾಲ್ಯವಿವಾಹ ತಡೆ ಮತ್ತು ಜಲದೀಕ್ಷೆ ಹಾಗೂ ಸಶಕ್ತ ಮನ–ಸಂತೃಪ್ತ ಜೀವನ ಎಂಬ ಜಾಗೃತಿ ಜಾಥಾದಂತಹ ಕಾರ್ಯಕ್ರಗಳಿಂದ ಸಾಮಾಜಿಕ ಚಿಂತನೆಗಳನ್ನು ಸಾರುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಜನ ಸೇರುವ ಜಾತ್ರೆಗಳಲ್ಲಿ ಗವಿಮಠದ ಜಾತ್ರೆಯೂ ಒಂದು. ಹಾಗಾಗಿ ದಕ್ಷಿಣ ಭಾರತದ ಕುಂಭ ಮೇಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತ್ರಿವಿಧ ದಾಸೋಹದಿಂದ ಬಹಳಷ್ಟು ಮಠವು ಗುರುತಿಸಿಕೊಂಡಿದೆ' ಎಂದರು.

ಗವಿಮಠ ಟ್ರಸ್ಟ್‌ನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, 'ಗದ್ದುಗೆ ಯ ಪ್ರಭಾವ, ಶ್ರೀಗಳ ಆಶೀರ್ವಾದ, ಜನರು, ಮಾಧ್ಯಮಗಳು ಗವಿಮಠ ಇಷ್ಟು ಪ್ರಸಿದ್ಧಿ ಗಳಿಸಲು ಕಾರಣವಾದ ಅಂಶಗಳು. ವಿದೇಶಗಳಲ್ಲಿ ಜಾತ್ರೆ‌ ಕುರಿತು ಮಾತನಾಡುತ್ತಿದ್ದಾರೆ. ಇದಕ್ಕೆ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ' ಎಂದರು.

ಟ್ರಸ್ಟ್‌ನ ಸದಸ್ಯ ಸಂಜಯ್‌ ಕೊತಬಾಳ, ಆಡಳಿತಾಧಿಕಾರಿ ಮರೇಗೌಡ್ರ, ಮುಖಂಡ ಸಂಜಯ್ ಕೊತಬಾಳ, ಸಾಹಿತಿ ಎಸ್‌.ಎಂ. ಕಂಬಾಳಿಮಠ, ಗವಿಮಠದ ಮಾಧ್ಯಮ ವಕ್ತಾರ ಪ್ರಕಾಶ್‌ ಬಳ್ಳಾರಿ ಇದ್ದರು. ಪ್ರಾಚಾರ್ಯ ಎಂ.ಎಸ್.ದಾದ್ಮಿ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.