ADVERTISEMENT

ನವಲಿಯಲ್ಲೇ ರೈಸ್‌ ಟೆಕ್‌ ಪಾರ್ಕ್‌: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 8:49 IST
Last Updated 30 ಜನವರಿ 2018, 8:49 IST
ಕನಕಗಿರಿ ಕನಕಾಚಲಪತಿ ಆವರಣದಲ್ಲಿ ಸೋಮವಾರ ನಡೆದ ನೂತನ ತಾಲ್ಲೂಕು ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಶಿವರಾಜ ತಂಗಡಗಿ ಮಾತನಾಡಿದರು
ಕನಕಗಿರಿ ಕನಕಾಚಲಪತಿ ಆವರಣದಲ್ಲಿ ಸೋಮವಾರ ನಡೆದ ನೂತನ ತಾಲ್ಲೂಕು ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಶಿವರಾಜ ತಂಗಡಗಿ ಮಾತನಾಡಿದರು   

ಕನಕಗಿರಿ: ‘ಒಣ ಭೂಮಿ ಹಾಗೂ ಮಳೆ ಆಧರಿತ ಕಂದಾಯ ಹೋಬಳಿ ಪ್ರದೇಶಗಳಾದ ಕನಕಗಿರಿ, ನವಲಿ ಹಾಗೂ ಹುಲಿಹೈದರ್ ಹೋಬಳಿ ಪ್ರದೇಶಗಳನ್ನು ಸೇರಿಸಿ ನೂತನ ಕನಕಗಿರಿ ತಾಲ್ಲೂಕು ಅಸ್ತಿತ್ವಕ್ಕೆ ಬಂದಿದ್ದು, ಒಣಬೇಸಾಯ ಪ್ರದೇಶಗಳ ತಾಲ್ಲೂಕಿಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯ, ಅನುದಾನ ಮುಂದಿನ ದಿನಮಾನಗಳಲ್ಲಿ ಈ ತಾಲ್ಲೂಕಿಗೆ ದೊರೆಯಲಿವೆ’ ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದರು.

ಇಲ್ಲಿನ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕನಕಗಿರಿ ತಾಲ್ಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹತ್ವಾಕಾಂಕ್ಷಿ ರೈಸ್‌ಟೆಕ್‌ ಪಾರ್ಕ್‌ ನವಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಳಿಯಲಿದೆ. ಈ ಬಗ್ಗೆ ಯಾರೂ ಆತಂಕ ಪಡುವುದು ಬೇಡ. ನನ್ನ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಕೆಲವರು ಸುಳ್ಳು ವದಂತಿ ಹಬ್ಬಿಸಿ ಜನರಲ್ಲಿ ಗೊಂದಲ ಸೃಷ್ಟಿಸಿ, ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಈ ಭಾಗದ ಜನರ ಅವಿರತ ಶ್ರಮ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿಟ್ಟ ನಿರ್ಧಾರದಿಂದ ಗಂಗಾವತಿ ತಾಲ್ಲೂಕಿನಲ್ಲಿಯೆ ಕನಕಗಿರಿ ಮತ್ತು ಕಾರಟಗಿ ಎರಡು ತಾಲ್ಲೂಕು ಕೇಂದ್ರಗಳಾಗಿವೆ. ಚುನಾವಣೆಯಲ್ಲಿ ಭರವಸೆ ನೀಡಿದಂತೆ ಕನಕಗಿರಿ ಉತ್ಸವ, ತಾಲ್ಲೂಕು ರಚನೆ ಹಾಗೂ ಕನಕಗಿರಿ, ಕಾರಟಗಿ ಗ್ರಾಮ ಪಂಚಾಯಿತಿಗಳನ್ನು ಕ್ರಮವಾಗಿ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ’ ಎಂದು ಹೇಳಿದರು.

‘₹141 ಕೋಟಿ ವೆಚ್ಚದಲ್ಲಿ ಈ ಭಾಗದ ಎಂಟು ಕೆರೆಗಳಿಗೆ ತುಂಗಭದ್ರಾ ಕಾಲುವೆ ಮೂಲಕ ನೀರು ತುಂಬಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಂಪುರ ಕೆರೆಯಿಂದ ರಾಮದರ್ಗಾ, ಕಾಟಾಪುರ ಕೆರೆಯಿಂದ ಶಿರಿವಾರ ಹಾಗೂ ಕರಡೋಣ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆಗೆ ₹18 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದರು.

‘ಕೃಷ್ಣಾ ಬಿ ಸ್ಕೀಂ ಯೋಜನೆ ಜಾರಿಯಾಗುತ್ತಿದ್ದು ಈ ಭಾಗದ 11 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಈಗಾಗಲೇ ಕಾಲುವೆಗಾಗಿ ಭೂಮಿ ಕಳೆದುಕೊಳ್ಳುವ ರೈತರ ಸಭೆ ಕರೆದು ಪರಿಹಾರ ಮೊತ್ತದ ಕುರಿತು ಚರ್ಚಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ‘ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯಲ್ಲಿ ಮೂರು ಹೊಸ ತಾಲ್ಲೂಕು ಕೇಂದ್ರಗಳಾಗಿದ್ದು, ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ಸಹಾಯಕವಾಗಲಿವೆ’ ಎಂದರು. ತಹಶೀಲ್ದಾರ್ ಎಲ್‌.ಡಿ.ಚಂದ್ರಕಾಂತ, ಅರಳಹಳ್ಳಿಯ ಗವಿಸಿದ್ದಯ್ಯ ತಾತ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು.

ಉಪ ವಿಭಾಗಾಧಿಕಾರಿ ಡಾ.ರವಿ ಎಂ.ತಿರ್ಲಾಪುರ, ತಾಲ್ಲೂಕು ಹೋರಾಟ ಸಮಿತಿ ಮುಖಂಡರಾದ ಕೆ. ಚನ್ನಬಸಯ್ಯ, ಶೇಖರಗೌಡ, ದುರ್ಗಾದಾಸ ಯಾದವ್, ಟಿ.ಸಂಗಪ್ಪ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶಬನಾಬೇಗಂ ಸಿಕ್ಲಗಾರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ನೀರ್ಲೂಟಿ, ಸದಸ್ಯರಾದ ಶಾಂತಾ ರಮೇಶ ನಾಯಕ, ಅಮರೇಶ ಗೋನಾಳ, ವಿಜಯಲಕ್ಷ್ಮೀ ಚಿನ್ನಪಾಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷಗೌಡ, ಉಪಾಧ್ಯಕ್ಷ ಕನಕಪ್ಪ ತಳವಾರ, ಸದಸ್ಯರಾದ ಗೌರಮ್ಮ ಜಡಿಯಪ್ಪ ಮುಕ್ಕುಂದಿ, ಬಸವರಾಜಸ್ವಾಮಿ ಹಿರೇಮಠ, ಭೀಮಮ್ಮ ರಾಮನಗೌಡ, ಶಿವಮ್ಮ ಚವಾಣ್, ಮಲ್ಲಿಕಾರ್ಜುನಗೌಡ, ಮಹ್ಮದರಫಿ, ಎಪಿಎಂಸಿ ನಿರ್ದೇಶಕರಾದ ರಾಮಚಂದ್ರ ನಾಯಕ, ಶಿವಶಂಕ್ರಪ್ಪ ಚನ್ನದಾಸರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮರಮ್ಮ ಗೋಸ್ಲೆಪ್ಪ ಗದ್ದಿ, ದುರಗಮ್ಮ ಸಿದ್ದರ, ಮಂಜುಳಾ ಕುಂಠೆಪ್ಪ ಇದ್ದರು.

ಅದ್ಧೂರಿ ಮೆರವಣಿಗೆ

ತಾಲ್ಲೂಕು ಉದ್ಘಾಟನೆಯ ನಿಮಿತ್ತ ಕಲ್ಮಠದಿಂದ ಆರಂಭವಾದ ತಾಯಿ ಭುವನೇಶ್ವರಿ ದೇವಿ ಹಾಗೂ ಕನಕಾಚಪತಿ ದೇವರ ಭಾವಚಿತ್ರ ಮತ್ತು ವಿವಿಧ ಕಲಾ ತಂಡಗಳ ಮೆರವಣಿಗೆ ರಾಜಬೀದಿಯಲ್ಲಿ ಅದ್ಧೂರಿಯಾಗಿ ನಡೆಯಿತು.

ಗೊರ್ಲೆಕೊಪ್ಪದ ಕರಡಿ ಮಜಲು, ಮಹಿಳಾ ವೀರಗಾಸೆ, ಕಂಪ್ಲಿಯ ತಾಷ ಮೇಳ, ಚಿಲಕಮುಖಿಯ ಮಲ್ಲಿಕಾರ್ಜನ ಅಲೆಮಾರಿ ಸಂಸ್ಕೃತಿ ಕಲಾವಿದರ ಗೊಂಬೆಗಳ ಕುಣಿತ, ಗಂಗಾವತಿಯ ಕಲ್ಯಾಣಂ ಜನಪದ, ಹಗಲು ವೇಷಗಾರರು, ವಿವಿಧ ಗ್ರಾಮಗಳ ಡೊಳ್ಳು ಕುಣಿತ, ಇತರೆ ಕಲಾ ತಂಡಗಳು, ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.