ADVERTISEMENT

ಅನುದಾನ ಕೇಳುವವರೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 10:11 IST
Last Updated 19 ಜುಲೈ 2017, 10:11 IST

ಶ್ರೀರಂಗಪಟ್ಟಣ: ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದಲ್ಲಿ ನೂರಾರು ಕೋಟಿ ಹಣ ಇದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ಅನುದಾನ ಕೇಳುವವರೇ ಇಲ್ಲ ಎಂದು ನಿಗಮದ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ವಿಭಾಗ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಿಗಮದ ಅನುದಾನದ ಸದ್ಬಳಕೆಯಾಗುತ್ತಿದೆ. ಆದರೆ ಹಳೇ ಮೈಸೂರು ಭಾಗದಲ್ಲಿ ಅನುದಾನಕ್ಕೆ ಬೇಡಿಕೆಯೇ ಬರುತ್ತಿಲ್ಲ.

ವಿಶ್ವಬ್ಯಾಂಕ್‌ ಮತ್ತು ಭಾರತ ಸರ್ಕಾರದಿಂದ ಬಂದ ಹಣ ಹಾಗೇ ಉಳಿದಿದೆ. ಈ ಭಾಗದಲ್ಲಿ ಶೇ 10ರಷ್ಟೂ ಹಣ ಖರ್ಚಾಗಿಲ್ಲ. ದಕ್ಷಿಣ ಕರ್ನಾಟಕದ ಜಿಲ್ಲೆಗಳ ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳು ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿಲ್ಲ. ಎಂಪವರ್‌ ಕಮಿಟಿ ಮುಂದೆ ಅನುದಾನ ಬಳಕೆಯಾಗದ ಕುರಿತು ಚರ್ಚಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಒಳ ಚರಂಡಿ ವ್ಯವಸ್ಥೆ, ಕೊಳಚೆ ನೀರು ಶುದ್ಧೀಕರಣ ಘಟಕ, ರಸ್ತೆಗಳ ಅಭಿವೃದ್ಧಿ, ವಾಣಿಜ್ಯ ಸಂಕೀರ್ಣ ನಿರ್ಮಾಣ ಇತರ ಉದ್ದೇಶಗಳಿಗೆ ಅನುದಾನ ನೀಡಲು ನಿಗಮ ಸಿದ್ಧವಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ವ್ಯಾಪ್ತಿಯ ಪಟ್ಟಣ ಮತ್ತು ನಗರ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು. ಇರುವ ಕೆಲವೇ ತಿಂಗಳಲ್ಲಿ ಲಭ್ಯ ಅನುದಾನ ಬಳಸಿಕೊಳ್ಳಿ’ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಎಂ. ಪುಟ್ಟೇಗೌಡ ಮಾತನಾಡಿ, ‘ಶ್ರೀರಂಗಪಟ್ಟಣ ದೇಶ, ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಪಟ್ಟಣ. ಆದರೆ, ಮೂಲ ಸೌಕರ್ಯಗಳ ಕೊರತೆ ಇದೆ. ಕೋಟೆ, ಬುರುಜು, ದೇವಾಲಯ, ನದಿ ತೀರ, ಟಿಪ್ಪು ಸ್ಮಾರಕ ಸೇರಿ ಹಲವು ಪ್ರವಾಸಿ ತಾಣಗಳಿದ್ದು, ದೇಶ, ವಿದೇಶಗಳ ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಾರೆ. ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ಸ್ಥಳೀಯ ಪುರಸಭೆ ಕಾರ್ಯ ಯೋಜನೆ ರೂಪಿಸಿ ಕೆಐಡಿಎಫ್‌ಸಿಗೆ ಸಲ್ಲಿಸಿ ಅನುದಾನ ಪಡೆದುಕೊಳ್ಳಬೇಕು’ ಎಂದರು.

ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಆತ್ಮಾನಂದ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 165 ವಾಗ್ದಾನಗಳಲ್ಲಿ 150ನ್ನು ಈಡೇರಿಸಿದೆ’ ಎಂದರು. ‘ಕಾಂಗ್ರೆನಲ್ಲಿ ಗೊಂದಲ ಇರುವುದು ನಿಜ. 2018ರ ಚುನಾವಣೆ ಹೊತ್ತಿಗೆ ಅದನ್ನು ಸರಿಪಡಿಸಿಕೊಂಡು ಪಕ್ಷವನ್ನು ಸಜ್ಜುಗೊಳಿಸಬೇಕು’ ಎಂದು ಕೆಪಿಸಿಸಿಯ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಮಲ್ಲಾಜಮ್ಮ ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌. ಲಿಂಗರಾಜು, ಮಾಜಿ ಅಧ್ಯಕ್ಷ ಎನ್‌.ಗಂಗಾಧರ್‌ ಮಾತನಾಡಿದರು. ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಎಚ್‌.ಬಿ.ಮಹೇಶ್‌, ಕೆ.ಗೋಪಾಲಗೌಡ, ವಿ.ನಾರಾಯಣ, ಪುರಸಭೆ ಸದಸ್ಯರಾದ ಸುನಿಲ್‌, ವೆಂಕಟಸ್ವಾಮಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಗುಣವಂತ, ಉಪಾಧ್ಯಕ್ಷ ದಿಲೀಪ್‌, ಕಾರ್ಯದರ್ಶಿ ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.