ADVERTISEMENT

ಆರೋಗ್ಯ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 4:51 IST
Last Updated 28 ಡಿಸೆಂಬರ್ 2016, 4:51 IST

ಶ್ರೀರಂಗಪಟ್ಟಣ: ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯಾಪ್ತಿಯಲ್ಲಿ ಬರುವ ಎಲ್ಲ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಸಂಧಿಸಿದ ಅಧಿಕಾರಿಗಳು ಹಾಗೂ ಸಂಘ, ಸಂಸ್ಥೆಗಳು ಸಹಕರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಹೇಳಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರದಿಂದ ಡಿ. 31ರವರೆಗೆ ನಡೆಯಲಿರುವ ‘ರಾಷ್ಟ್ರೀಯ ಆರೋಗ್ಯ ಅಭಿಯಾನ’ದ ಜನ ಜನಜಾಗೃತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಶಿಶು ಸುರಕ್ಷಾ ಯೋಜನೆ, ಜನ ಸುರಕ್ಷಾ ಯೋಜನೆ (ಜೆಎಸ್‌ವೈ), ಮಡಿಲು ಕಿಟ್‌, ಲಸಿಕಾ ಕಾರ್ಯ ಕ್ರಮಗಳು ಜನರಿಗೆ ತಲುಪಬೇಕು, ಹೆಣ್ಣು ಭ್ರೂಣಹತ್ಯೆ, ಬಾಲ್ಯ ವಿವಾಹ, ಹದಿಹರೆ ಯದವರ ಸಮಸ್ಯೆಗಳು, ಜನಸಂಖ್ಯಾ ಸ್ಫೋಟದಂತಹ ಸಾಮಾಜಿಕ ಪಿಡುಗು ಗಳನ್ನು ಸಂಪೂರ್ಣ ತೊಡೆದು ಹಾಕಲು ಕೈ ಜೋಡಿಸಬೇಕು. ಅಗತ್ಯ ಸಂದರ್ಭಗಳಲ್ಲಿ ಆರೋಗ್ಯ ಸಹಾಯ ವಾಣಿಯ ಸಹಾಯ ಪಡೆಯಬೇಕು ಎಂದು ಅವರು ತಿಳಿಸಿದರು.

ರಾಗ ರಂಜಿನಿ ಕಲಾ ತಂಡದ ಅಧ್ಯಕ್ಷ ಎಂ.ಬಸವಯ್ಯ ಮಾತನಾಡಿ, ಡಿ.28ರಂದು ಮಧ್ಯಾಹ್ನ ಮೊಗರಹಳ್ಳಿ ಮಂಟಿ, ಸಂಜೆ ಬಲ್ಲೇನಹಳ್ಳಿ; ಡಿ. 29ರಂದು ಮಧ್ಯಾಹ್ನ ಕೆ.ಶೆಟ್ಟಹಳ್ಳಿ, ಸಂಜೆ ಗೌಡಹಳ್ಳಿ; ಡಿ.30ರಂದು ಮಧ್ಯಾಹ್ನ ಮಹದೇವಪುರ, ಸಂಜೆ ಅರಕೆರೆ; ಡಿ.31ರಂದು ಮಧ್ಯಾಹ್ನ ಬಳ್ಳೇಕೆರೆ ಹಾಗೂ ಸಂಜೆ ಬನ್ನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಜನ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಬೀದಿ ನಾಟಕ ಹಾಗೂ ಜನಪದ ಗೀತೆ, ಜಾಗೃತಿ ಗೀತೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು. ಡಾ.ವೆಂಕಟೇಶ್‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಾ.ಶಾಲಿನಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಂಗಳಾ ಇತರರು ಇದ್ದರು. ಕಲಾವಿದರಾದ ರಾಮಕೃಷ್ಣ, ಸವಿತಾ, ರಾಜಣ್ಣ, ಹೊನ್ನೇಶ್‌, ಯೋಗೇಶ್‌ ಇತರರು ಜಾಗೃತಿ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.