ADVERTISEMENT

ಒಂದೇ ಕೈಯಲ್ಲಿ ಪಂಕ್ಚರ್‌ ಹಾಕುವ ನಯಾಜ್‌!

ಎನ್.ಪುಟ್ಟಸ್ವಾಮಾರಾಧ್ಯ
Published 18 ಸೆಪ್ಟೆಂಬರ್ 2017, 8:40 IST
Last Updated 18 ಸೆಪ್ಟೆಂಬರ್ 2017, 8:40 IST
ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಬಳಿ ಮುಖ್ಯರಸ್ತೆ ಬದಿ ಇರುವ ಸರ್ವೀಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿರುವ ನಯಾಜ್‌ ಪಾಷ
ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಬಳಿ ಮುಖ್ಯರಸ್ತೆ ಬದಿ ಇರುವ ಸರ್ವೀಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿರುವ ನಯಾಜ್‌ ಪಾಷ   

ಮಳವಳ್ಳಿ: ಅಂಗವಿಕಲನಾದರೂ ಮನೆಯಲ್ಲಿ ಕೂರದೆ ಪ್ರತಿದಿನ 20 ಕಿ.ಮೀ. ಸಂಚರಿಸಿ ದುಡಿಯುತ್ತಿರುವ ಈ ಯುವಕ ಇತರರಿಗೂ ಮಾದರಿಯಾಗಿದ್ದಾರೆ. ತಾಲ್ಲೂಕಿನ ತೊರೆಕಾಡನಹಳ್ಳಿ ಬಳಿ ಮುಖ್ಯರಸ್ತೆ ಬದಿಯಲ್ಲಿರುವ ಸರ್ವೀಸ್‌ ಸ್ಟೇಷನ್‌ನಲ್ಲಿ ಕೆಲಸ ಮಾಡುವ ಇವರು ವಾಹನಗಳಿಗೆ ಪಂಕ್ಚರ್‌, ಸರ್ವೀಸ್ ‌ಮತ್ತಿತರ ರಿಪೇರಿ ಕಾರ್ಯ ಮಾಡುವ ನಯಾಜ್‌ ಪಾಷಾಗೆ ಬಲಗೈನಲ್ಲಿ ವೈಕಲ್ಯವಿದೆ. ವೈಕಲ್ಯವನ್ನು ಲೆಕ್ಕಿಸದೇ ಸದಾ ವಾಹನಗಳನ್ನು ರಿಪೇರಿ ಮಾಡುವ ಅವರು ಎಲ್ಲಾ ಅಂಗಗಳು ಸರಿಯಾಗಿ ಇರುವವರನ್ನು ನಾಚಿಸುತ್ತಾರೆ.

ಸದಾ ಒಂದಿಲ್ಲೊಂದು ಕಾರ್ಯದಲ್ಲೇ ಮಗ್ನರಾಗಿರುವ ಅವರು ಉತ್ಸಾಹದಿಂದ ಇರುತ್ತಾರೆ. ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ ಪೀರ್‌ ಪಾಷಾ ಅವರ ಪುತ್ರ ನಯಾಜ್  ಚಿಕ್ಕಂದಿನಲ್ಲಿ ಎಲ್ಲರಂತೆ ಇದ್ದರು. ಆದರೆ ಐದು ವರ್ಷದವನಾಗಿದ್ದಾಗ ಆಕಸ್ಮಿಕವಾಗಿ ಬಿದ್ದು ಬಲಗೈ ಊನವಾಯಿತು.

ನಂತರ ನಯಾಜ್‌ ಶಾಶ್ವತವಾಗಿ ಅಂಗವಿಕಲರಾದರು. ವೈಕಲ್ಯದೊಂದಿಗೆ ಶಾಲೆಗೆ ತೆರಳಿದ ಅವರು ಓದಿನಲ್ಲೂ ಮುಂದಿದ್ದರು. ಪಿಯುಸಿವರಗೆ ಕಲಿತಿರುವ ಅವರು ನಂತರ ವಾಹನಗಳಿಗೆ ಸಣ್ಣ ಪುಟ್ಟ ರಿಪೇರಿ ಕಾರ್ಯ ಮಾಡಲು ಮುಂದಾದರು. ಕಳೆದ ನಾಲ್ಕು ವರ್ಷಗಳಿಂದ ತೊರೆಕಾಡನಹಳ್ಳಿ ಬಳಿ ಹಲಗೂರಿನ ಹಮೀದ್ ಎಂಬುವರ ಸರ್ವೀಸ್ ಸ್ಟೇಷನ್‌ನಲ್ಲಿ ವಾಹನಗಳ ಸರ್ವೀಸ್, ಗ್ರೀಸಿಂಗ್ ಮಾಡುವುದು ಮುಂತಾದ ಕೆಲಸ ಮಾಡುತ್ತಾರೆ. ದೊಡ್ಡ ದೊಡ್ಡ ವಾಹನಗಳಿಗೂ ಒಂದೇ ಕೈನಲ್ಲಿ ಪಂಕ್ಚರ್‌ ಹಾಕುತ್ತಾರೆ.

ADVERTISEMENT

ವಾಹನಗಳಿಂದ ಟೈರ್‌ ಬಿಚ್ಚಿ, ಪಂಕ್ಚರ್‌ ಹಾಕಿ ನಂತರ ಯಾರ ಸಹಾಯವೂ ಇಲ್ಲದೇ ಅವರೇ ಟೈರ್‌ ಜೋಡಿಸುತ್ತಾರೆ. ಸರ್ವೀಸ್‌ಗಾಗಿ ಬರುವ ವಾಹಗಳನ್ನು ತಾವೇ ಚಾಲನೆ ಮಾಡಿ ನಿಲ್ಲಿಸುತ್ತಾರೆ. ಇದರ ಜೊತೆಗೆ ಚಕ್ರಗಳಿಗೆ ಗಾಳಿ ತುಂಬಿಸಲು ಒಂದೇ ಕೈನಲ್ಲಿ ಮೋಟಾರ್ ಚಾಲನೆ ಮಾಡಿ ಬೆಲ್ಟ್‌ ಸಹ ಹಾಕಿಕೊಳ್ಳುತ್ತಾರೆ. ಇದನ್ನು ಕಾಣುವ ಗ್ರಾಹಕರು ಯುವಕನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಎರಡು ಕೈಗಳಿರುವ ಯುವಕರು ಕೆಲಸ ಮಾಡಲು ನಿರ್ಲಕ್ಷ್ಯ ಮಾಡುವ ಇಂತಹ ಕಾಲದಲ್ಲಿ ಒಂದೇ ಕೈಯಲ್ಲಿ ಕೆಲಸ ಮಾಡುತ್ತಾ ಜೀವನ ಮಾಡುವ ನಯಾಜ್‌ ಯುವಜನರಿಗೆ ಮಾದರಿಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.