ADVERTISEMENT

ಒತ್ತಡ ನಿವಾರಣೆಗಾಗಿ ಬುದ್ಧವಿಹಾರ ಕೇಂದ್ರ

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:48 IST
Last Updated 13 ಮೇ 2017, 10:48 IST

ಪಾಂಡವಪುರ: ‘ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವುದು,  ಬುದ್ಧನ ವಿಚಾರಗಳನ್ನು ಪ್ರಚಾರ ಮಾಡುವುದು ಹಾಗೂ ಮನುಷ್ಯ ಒತ್ತಡದ ಜೀವನದಿಂದ ಹೊರಬರಲು ಬುದ್ಧವಿಹಾರ ಕೇಂದ್ರಗಳು ಅವಶ್ಯ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಪಟ್ಟಣಗೆರೆ ಗ್ರಾಮದ ಬಳಿ ಗೌತಮ ಮಹಾಬೋಧಿ ಸೇವಾ ಟ್ರಸ್ಟ್‌, ಮೈಸೂರು ಇವರು ಶುಕ್ರವಾರ ಆಯೋಜಿಸಿದ್ದ ಬುದ್ಧ ವಿಹಾರ ಕೇಂದ್ರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಗೌತಮ ಬುದ್ಧರ ವಿಚಾರಗಳು ಜನರಲ್ಲಿ ಪ್ರಭಾವ ಬೀರುತ್ತಿವೆ. ಸಮಾನತೆಗಾಗಿ ಶ್ರಮಿಸಿದ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ಸಾಧನೆ, ವಿಚಾರಧಾರೆ, ಸಿದ್ಧಾಂತಗಳನ್ನು ಸಮಾಜಕ್ಕೆ ಸಾರುವ ನಿಟ್ಟಿನಲ್ಲಿ ಕೇಂದ್ರಗಳ ಪಾತ್ರವೂ ಪ್ರಮುಖ ಎಂದು ಹೇಳಿದರು.

ADVERTISEMENT

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಸಮಾಜದಲ್ಲಿ ಜಾತಿ, ಧರ್ಮದ ವಿಷಬೀಜವನ್ನು ಬಿತ್ತಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯಲು ಬುದ್ಧನ ತತ್ವಗಳು ಅವಶ್ಯ ಎಂದರು.

ಕೇಂದ್ರದಲ್ಲಿ ಧ್ಯಾನಕೇಂದ್ರ, ಆಯುರ್ವೇದ ಕೇಂದ್ರ ಹಾಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಗೌತಮ ಮಹಾಬೋಧಿ ಸೇವಾ ಟ್ರಸ್ಟ್‌ ಅಧ್ಯಕ್ಷ ಟಿ.ಆರ್.ಜವರಾಯಿ ತಿಳಿಸಿದರು.
ಬೌದ್ಧ ಧರ್ಮದ ಶ್ರೀಲಂಕಾದ ಗುರುಗಳಾದ ಶ್ರೀಬದಂತ್ ನವಪಾಲ್ ಬಂತೆ, ಧಮ್ಮಲೋಕ ಬಂತೆ ಸಹರಾನಂದ ಬಂತೆ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.