ADVERTISEMENT

ಓಟದ ಮೂಲಕ ಕನ್ನಡ ಜಾಗೃತಿ ಮೂಡಿಸಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2016, 8:19 IST
Last Updated 26 ಡಿಸೆಂಬರ್ 2016, 8:19 IST

ಮಂಡ್ಯ: ಕನ್ನಡ ರಾಜ್ಯೋತ್ಸವ ನವೆಂಬರ್‌ ತಿಂಗಳಿಗೆ ಮಾತ್ರ ಸೀಮಿತ ಆಗಬಾರದು. ಕುವೆಂಪು ಆಶಯದಂತೆ ಅದು ಕನ್ನಡ ನಿತ್ಯೋತ್ಸವ ಆಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ನಗರದ ಸ್ವರ್ಣಸಂದ್ರ ಬಡಾವಣೆಯ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದ ಬಳಿ ಕಾಯಕಯೋಗಿ ಫೌಂಡೇಶನ್‌ ಹಾಗೂ ಸ್ಪಂದನ ದಿಟ್ಟಹೆಜ್ಜೆ ಮಹಿಳಾ ಟ್ರಸ್ಟ್‌ ವತಿಯಿಂದ ಭಾನುವಾರ ನಡೆದ ರಾಜ್ಯಮಟ್ಟದ ಮಂಡ್ಯ ಮ್ಯಾರಥಾನ್‌ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮ್ಯಾರಥಾನ್ ಮೂಲಕ ಕನ್ನಡ ಭಾಷೆ, ನೆಲ, ಜಲ ಜಾಗೃತಿಗಾಗಿ ಆಯೋಜಿಸಿರುವ ಕನ್ನಡ ಓಟ ಮಾದರಿಯಾಗಿದೆ. ರಾಜ್ಯೋತ್ಸವ ಕೇವಲ ನವೆಂಬರ್‌ ತಿಂಗಳಿಗೆ ಮೀಸಲಾಗ ಬಾರದು, ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕನ್ನಡ ನಿತ್ಯೋತ್ಸವ ಆಗಬೇಕು. ಆ ನಿಟ್ಟಿನಲ್ಲಿ ಮ್ಯಾರಥಾನ್ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆ ಅರಿವು ಮೂಡಿಸಬೇಕು ಎಂದರು.

‘ಕನ್ನಡಕ್ಕಾಗಿ ಓಡು’, ‘ಕಾವೇರಿ ನಮ್ಮದು’ ಎಂಬ ಘೋಷಣೆಯೊಂದಿಗೆ ರಾಜ್ಯಮಟ್ಟದ ಓಟದ ಸ್ಪರ್ಧೆ ಆಯೋಜಿ ಸುವ ಮೂಲಕ ಮಾತೃಭಾಷಾ ಪ್ರೇಮ ಬಿತ್ತುವ ಕಾಯಕದಲ್ಲಿ ನಿರತರಾಗಿರುವ ಫೌಂಡೇಷನ್‌ ನಡೆ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಮಾತನಾಡಿ, ರೈತರ ಆತ್ಮಹತ್ಯೆ ತಡೆ, ಪರಿಸರ ಸಂರಕ್ಷಣೆ, ಸರ್ವರಿಗೂ ಶಿಕ್ಷಣ ಮತ್ತು ಆರೋಗ್ಯ ಹಾಗೂ ಸ್ವಚ್ಛತಾ ಆಂದೋಲನ ದೃಷ್ಟಿ ಯನ್ನಿಟ್ಟುಕೊಂಡು ಆಯೋಜಿಸಿ ರುವ ಮ್ಯಾರಥಾನ್ ಓಟ ಎಲ್ಲರಲ್ಲೂ ಐಕ್ಯತಾ ಮನೋಭಾವ ಮೂಡಿಸಲಿ ಎಂದರು.

ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಪೊಲೀಸ್‌ ಉಪ ಅಧೀಕ್ಷಕ ಬಿ.ಎಸ್‌.ಚಂದ್ರಶೇಖರ್‌, ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘ ಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ, ಕಾಂಗ್ರೆಸ್ ಮುಖಂಡ ಶಿವನಂಜು, ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಟ್ರಸ್ಟ್‌ನ ಅಧ್ಯಕ್ಷೆ ಅರುಣ ಜ್ಯೋತಿ, ವಕೀಲ ಎಂ.ಗುರುಪ್ರಸಾದ್  ಉಪಸ್ಥಿತರಿದ್ದರು.

ವಿಜೇತರು ಪಟ್ಟಿ: ಪುರುಷರ ವಿಭಾಗ (10 ಕಿ.ಮೀ): ಮೈಸೂರಿನ ಆರ್. ಸಂದೀಪ್ (ಪ್ರಥಮ) ಜಿ.ಜೆ. ಚೇತನ್(ದ್ವಿತೀಯ), ಟಿ.ಎಸ್. ಸಂದೀಪ್(ತೃತೀಯ). ಮಹಿಳಾ ವಿಭಾಗ(5 ಕಿ.ಮೀ): ಮೈಸೂರಿನ ತಿಪ್ಪವ್ವ ಸಣ್ಣಕ್ಕಿ(ಪ್ರಥಮ), ಮಂಡ್ಯ ತಾಲ್ಲೂಕಿನ ಮುತ್ತೇಗೆರೆ ಸರ್ಕಾರಿ ಶಾಲೆಯ ಎಚ್.ಕೆ. ಕಾವ್ಯ(ದ್ವಿತೀಯ) ಹಾಗೂ ಮೈಸೂರಿನ ಕೆ.ಎಂ. ಅರ್ಚನಾ ತೃತೀಯ ಸ್ಥಾನ ಪಡೆದರು.

ಹೆಣ್ಣುಮಕ್ಕಳದ್ದೇ ಮೇಲುಗೈ
ಮಂಡ್ಯ: ಮಂಡ್ಯ ಮ್ಯಾರಥಾನ್ ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ನಡುಗುವ ಚಳಿಯಲ್ಲಿಯೂ ಉತ್ಸಾಹದಿಂದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

ಸ್ಪರ್ಧೆಗಳಲ್ಲಿ ಪುರುಷರಿಗೆ 10 ಕಿ.ಮೀ ಹಾಗೂ ಮಹಿಳೆಯರಿಗೆ 5 ಕಿ.ಮೀ ಗುರಿ ನೀಡಲಾಗಿತ್ತು. ಓಟದಲ್ಲಿ ಹಿರಿಯ ನಾಗರಿಕರು ಭಾಗವಹಿಸಿದ್ದುದು ವಿಶೇಷವಾಗಿತ್ತು. 60 ರಿಂದ 70 ವರ್ಷ ವಯೋಮಾನದ ಅಜ್ಜಿಯಂದಿರೂ 5 ಕಿ.ಮೀ. ಓಡುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಬಹುಮಾನ ಗೆದ್ದು ಬೀಗಿದರು.

ಹಿರಿಯ ನಾಗರಿಕರು ಸೇರಿದಂತೆ, ಮ್ಯಾರಥಾನ್‌ ಓಟದಲ್ಲಿ ಹೆಣ್ಣುಮಕ್ಕಳೇ ಹೆಚ್ಚು  ಬಹುಮಾನ ಗೆದ್ದುಕೊಂಡರು. ಕೊರೆವ ಚಳಿಯಲ್ಲಿ ಎಲ್ಲರೂ ಶಿಳ್ಳೆ ಹಾಕುತ್ತಾ ಎದ್ದು ಬಿದ್ದು ಓಡಿದರು. ಗುರಿ ತಲುಪಲು ಹರಸಾಹಸ ಪಟ್ಟು ಬೆವರು ಹರಿಸಿದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT