ADVERTISEMENT

ಕಂದಾಯ ಅಧಿಕಾರಿಗಳ ವಿರುದ್ಧ ದೂರು

ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಪರಭಾರೆ

​ಪ್ರಜಾವಾಣಿ ವಾರ್ತೆ
Published 31 ಮೇ 2016, 5:23 IST
Last Updated 31 ಮೇ 2016, 5:23 IST

ಕೆ.ಆರ್.ಪೇಟೆ: ತಾಲ್ಲೂಕಿನ ಆನೆಗೊಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಜಮೀನಿನ ಸುಳ್ಳು ದಾಖಲೆ ಸೃಷ್ಟಿಸಿ ಮತ್ತೊಬ್ಬರ ಹೆಸರಿಗೆ ಖಾತೆ ಮಾಡಿ ಅಕ್ರಮ ಮಾರಾಟಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆಯ  ನೌಕರರೂ ಸೇರಿದಂತೆ  ಹಲವರ ವಿರುದ್ದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಯನ್ನು ಸೋಮವಾರ ದಾಖಲಿಸಲಾಗಿದೆ.

ಹೊಳೆನರಸೀಪುರ ಪಟ್ಟಣದ ನಿವಾಸಿ ಎಂ.ಎಸ್.ಶ್ರೀಕಾಂತ್ ಎನ್ನುವವರು ತಾಲ್ಲೂಕು ಕಚೇರಿಯ ಭೂಮಿ ಶಾಖೆಯ ಆಪರೇಟರ್ ರಘುರಾಜಶೆಟ್ಟಿ, ಗ್ರಾಮ ಲೆಕ್ಕಿಗ ಎಚ್.ಎಸ್.ಲಂಕೇಶ್, ಭೂಮಾಪಕ ಅರುಣ್ ಕುಮಾರ್, ಶಿರಸ್ತೆದಾರರಾದ  ರಾಮಕೃಷ್ಣ ಮತ್ತು ಗೋಪಾಲಕೃಷ್ಣ, ಸಹಾಯಕ ಸಾಂಖ್ಯಿಕ ಅಧಿಕಾರಿ ಎ.ಎಸ್. ಶಿವಕುಮಾರ್, ಆನೆಗೊಳ ಗ್ರಾಮದ ಎಂ.ಎಸ್.ಮೋಹನಕುಮಾರ್ ಮತ್ತು ಎಂ.ಎಸ್ ತಾತಾಚಾರ್ ಎನ್ನುವವರ  ವಿರುದ್ಧ ದೂರು ದಾಖಲಿಸಿದ್ದಾರೆ.

ವಿವರ: ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ದೂರುದಾರ ಎಂ.ಎಸ್.ಶ್ರೀಕಾಂತ್ ಅವರ ವಂಶದ ಎಂ.ಟಿ. ಕೃಷ್ಣಸ್ವಾಮಿ ಅಯ್ಯಂಗಾರ್ ಬಿನ್ ತಾತಾಚಾರ್ ಎನ್ನುವವರಿಗೆ 04 ಗುಂಟೆ ಜಮೀನು ಇತ್ತು.

ಎಂ.ಟಿ.ಕೃಷ್ಣಸ್ವಾಮಿ ಅಯ್ಯಂಗಾರ್ ಅವರು 1971ರಲ್ಲಿ ಮರಣ ಹೊಂದಿದ್ದಾರೆ. ಗ್ರಾಮಮದ ಎಂ.ಕೆ ಸಂಪತ್ ಅಯ್ಯಂಗಾರ್ ಅವರ ಮಕ್ಕಳಾದ ಎಂ.ಎಸ್. ಮೋಹನಕುಮಾರ್ ಮತ್ತು ಎಂ.ಎಸ್. ತಾತಾಚಾರ್ ಎನ್ನುವವರೊಂದಿಗೆ ಶಾಮೀಲಾಗಿ ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಎಂ.ಟಿ. ಕೃಷ್ಣಸ್ವಾಮಿ ಅಯ್ಯಂಗಾರ್ ಬಿನ್ ತಾತಾಚಾರ್ ಎನ್ನುವ ಹೆಸರನ್ನು ಎಂ.ಜೆ. ಕೃಷ್ಣಸ್ವಾಮಿ ಅಯ್ಯಂಗಾರ್ ಬಿನ್ ಪಾಣಾಚಾರ್ಯ ಎಂದು ತಿದ್ದುಪಡಿ ಮಾಡಿ ನಕಲಿ ವಂಶವೃಕ್ಷ ಸೃಷ್ಟಿಸಿ, ಎಂ.ಕೆ.ಸಂಪತ್ ಅಯ್ಯಂಗಾರ್ ಹೆಸರಿಗೆ ಪೌತಿ ಖಾತೆ ಮಾಡಿಕೊಡಲಾಗಿದೆ.

ಎಂ.ಟಿ.ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ಸಹೋದರನ ಮಗ ಎಂ.ಎಸ್.ಶ್ರೀಕಾಂತ್ ಎನ್ನುವವರು ಪಾಂಡವಪುರ ಉಪ ವಿಭಾಗಾಧಿಕಾರಿಗೆ 2015ರಲ್ಲಿ ದೂರು ನೀಡಿದ್ದರು. ಅವರ ಸೂಚನೆಯ ಮೇರೆಗೆ ಅಂದಿನ ತಹಶೀಲ್ದಾರ್ ಅವರು ಕಂದಾಯ ಇಲಾಖೆ ನೌಕರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆ ವರದಿಯ ಮೇರೆಗೆ ಶಿಸ್ತು ಕ್ರಮಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ ಉಪವಿಭಾಗಾಧಿಕಾರಿ ವರದಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಎಂ.ಎಸ್.ಶ್ರೀಕಾಂತ್ ಅವರು ಈಗ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.