ADVERTISEMENT

ಕಾವೇರಿ ನದಿ ಸ್ವಚ್ಛತೆಗಾಗಿ ಶ್ರಮದಾನ

ವಿವಿಧ ಸಂಘಟನೆಗಳ ನೂರಕ್ಕೂ ಹೆಚ್ಚು ಜನರು ಭಾಗಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 7:23 IST
Last Updated 18 ಜೂನ್ 2018, 7:23 IST

ಶ್ರೀರಂಗಪಟ್ಟಣ: ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ, ಅಭಿನವ ಭಾರತ್‌ ತಂಡ, ಬೆಂಗಳೂರಿನ ಸದೃಶಂ ಹಾಗೂ ಇತರ ಸಂಘ, ಸಂಸ್ಥೆಗಳ ಸದಸ್ಯರು ಭಾನುವಾರ ಇಲ್ಲಿ ಕಾವೇರಿ ನದಿಯನ್ನು ಸ್ವಚ್ಛಗೊಳಿಸಿದರು.

ಉತ್ತರ ಕಾವೇರಿ ಸೇತುವೆ ಮತ್ತು ವೆಲ್ಲೆಸ್ಲಿ ಸೇತುಗೆ ನಡುವೆ ಶ್ರಮದಾನ ನಡೆಯಿತು. 100ಕ್ಕೂ ಹೆಚ್ಚು ಮಂದಿ ಶ್ರಮದಾನ ನಡೆಸಿದರು. ನದಿಯಲ್ಲಿ ಬಿದ್ದಿದ್ದ ಜೊಂಡು, ಕತ್ತೆಕಿವಿ ಸಸ್ಯ, ವಿವಿಧ ಬಳ್ಳಿಗಳನ್ನು ಕುಡುಗೋಲು, ಮಚ್ಚು, ಲೋಟಿ ಗಳದ ಸಹಾಯದಿಂದ ಕತ್ತರಿಸಿ ತೆಗೆದರು. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ನಿರಂತರವಾಗಿ ಶ್ರಮದಾನ ನಡೆಯಿತು.

ಪ್ರಸಿದ್ಧ ಜೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ, ಎಂಜಿನಿಯರ್‌ ಶಿವಾನಂದ್‌, ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮೀಶ್‌, ಲೇಖಕ ರಾಧಾಕೃಷ್ಣ ಭಡ್ತಿ ಇತರ ಪ್ರಮುಖರು ಕೂಡ ನದಿಗೆ ಇಳಿದು ಕಳೆ ಗಿಡಗಳನ್ನು ಮೇಲೆ ಸಾಗಿಸಿದರು. ಸ್ವಚ್ಛತೆ ಕಾರ್ಯಕ್ಕೆ 3 ಜೆಸಿಬಿ ಯಂತ್ರಗಳು, ಎರಡು ಟ್ರ್ಯಾಕ್ಟರ್‌ಗಳು ಹಾಗೂ 10 ಹರಿಗೋಲುಗಳನ್ನು ಬಳಸಲಾಯಿತು.

ADVERTISEMENT

‘ಮೂರನೇ ಭಾನುವಾರವೂ ಕಾವೇರಿ ನದಿಯ ಸ್ವಚ್ಛತೆ ನಡೆದಿದೆ. ಎರಡು ಸೇತುವೆಗಳ ನಡುವಿನ ಸ್ಥಳವನ್ನು ಸ್ವಚ್ಛಗೊಳಿಸಿದ್ದೇವೆ. ಇನ್ನೂ ಸಾಕಷ್ಟು ಕೆಲಸ ಬಾಕಿಯಿದೆ. ಯಾತ್ರಾರ್ಥಿಗಳು ಹೆಚ್ಚು ಭೇಟಿ ನೀಡುವ ಸೋಪಾನಕಟ್ಟೆ, ಪಶ್ಚಿಮವಾಹಿನಿ, ವಾಟರ್‌ ಗೇಟ್‌, ಜೀಬಿ ಹೊಳೆ ಸ್ಥಳಗಳಲ್ಲಿ ಮುಂದಿನ ಭಾನುವಾ ರಗಳಂದು ಸ್ವಚ್ಛತೆ ನಡೆಯ ಲಿದೆ’ ಎಂದು ಭಾನುಪ್ರಕಾಶ್‌ ಶರ್ಮಾ ತಿಳಿಸಿದರು.

‘ನದಿಯ ನೀರಿನ ಮೇಲೆ ವಿಪರೀತ ಕಳೆ ಗಿಡಗಳು ಬೆಳೆದಿದ್ದವು. ವಾರದಲ್ಲಿ ಒಂದು ದಿನ ನದಿ ಸ್ವಚ್ಛತೆಗೆ ಇಳಿದಿದ್ದೇವೆ. ಮೂರು ದಿನಗಳ ಸ್ವಚ್ಛತಾ ಕಾರ್ಯದಿಂದ ನದಿ ಭಾಗಶಃ ಸ್ವಚ್ಛಗೊಂಡಿದೆ. ನಮ್ಮ ಕಾರ್ಯ ಮುಂದುವರೆಯಲಿದೆ’ ಎಂದು ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.