ADVERTISEMENT

ಕಾವೇರಿ ಪುಷ್ಕರ: ಸಾಧು, ಸಂತರಿಂದ ಜಲ ಯಜ್ಞ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 7:19 IST
Last Updated 16 ಸೆಪ್ಟೆಂಬರ್ 2017, 7:19 IST

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ಮಹಾ ಪುಷ್ಕರದ ನಿಮಿತ್ತ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾವೇರಿ ನದಿ ತೀರದಲ್ಲಿ ಧಾರ್ಮಿಕ ವಿಧಿ, ವಿಧಾನಗಳು ನಡೆದವು.

ಬೆಳೀಗ್ಗೆ ಕಾವೇರಿ ಸೋಪಾನಕಟ್ಟೆ ಬಳಿ ಕಾವೇರಿ ಮತ್ತು ಗಂಗಾ ಜಲದ ಪವಿತ್ರ ಕುಂಭಗಳ ಪೂಜೆ ನಡೆಯಿತು. ಕುಂಭೇಶ್ವರ ಸ್ತ್ರೋತ್ರ ಪಠಣ, ಕಳಶ ಪೂಜೆ, ವೇದ ಪಾರಾಯಣ, ಮಹಾ ಸಂಕಲ್ಪ, ಷೋಡಶೋಪಚಾರ ಪೂಜೆ, ತೀರ್ಥ ಪ್ರೋಕ್ಷಣೆಗಳು ಜರುಗಿದವು.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮೊದಲಾದ ಕಡೆಗಳಿಂದ ಬಂದಿದ್ದ ಯತಿಗಳು ಹಾಗೂ ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಸಾಧು, ಸಂತರು ಜಲ ಯಜ್ಞದಲ್ಲಿ ಪಾಲ್ಗೊಂಡರು. ನೀರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕುಳಿತು ಸ್ತ್ರೋತ್ರ ಪಠಿಸಿದರು.

ADVERTISEMENT

ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ವಾರಿಜಾ ನೃತ್ಯ ಕಲಾ ಶಾಲೆಯ ಕಲಾವಿದರು ದಶಾವತಾರ ನೃತ್ಯ ರೂಪಕ ಪ್ರದರ್ಶಿಸಿದರು. ರಾಮ, ಕೃಷ್ಣ, ವರಾಹ, ಕೂರ್ಮ, ಬುದ್ಧ, ಕಲ್ಕಿ ಸೇರಿದಂತೆ ವಿವಿಧ ಅವತಾರಗಳನ್ನು ನೃತ್ಯದ ಮೂಲಕ ಅರ್ಥವತ್ತಾಗಿ ಪ್ರಸ್ತುಪಡಿಸಿ ಚಪ್ಪಾಳೆ ಗಿಟ್ಟಿಸಿದರು.

ಸೆ.18ರಂದು ಗಂಜಾಂ ನಿಮಿಷಾಂಬಾ ದೇವಾಲಯ ಹಾಗೂ ಸೆ.19ರಂದು ದೊಡ್ಡ ಗೋಸಾಯಿಘಾಟ್‌ ಬಳಿ ಸಂಜೆ 5ಕ್ಕೆ ಕಾವೇರಿ ಮಹಾ ಪುಷ್ಕರದ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಗಂಜಾಂ ಆದಿ ಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ತಿಳಿಸಿದರು.

ಗಜಾನನ ಸ್ವಾಮೀಜಿ, ತಿ.ನರಸೀಪುರ ರಾಮರೂಢ ಮಠದ ಸಾಧ್ವಿ ವೇದವತಿ, ಮೈಸೂರು ತ್ರಿಪುರ ಭೈರವಿ ಮಠದ ಕೃಷ್ಣ ಮೋಹನಾನಂದಗಿರಿ ಸ್ವಾಮೀಜಿ, ಕಾವೇರಿ ಕನ್ಯಾ ಗುರುಕುಲದ ಡಾ.ಕೆ.ಕೆ.ಸುಬ್ರಮಣಿ, ಡಾ.ಭಾನುಪ್ರಕಾಶ್‌ ಶರ್ಮಾ, ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌.ಲಕ್ಷ್ಮೀಶ್‌ ಇತರ ಸಾಧು, ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.