ADVERTISEMENT

ಕೀಳು ರಾಜಕೀಯ ಪ್ರಚಾರದಿಂದ ಹೊರ ಬನ್ನಿ

​ಪ್ರಜಾವಾಣಿ ವಾರ್ತೆ
Published 29 ಮೇ 2017, 7:18 IST
Last Updated 29 ಮೇ 2017, 7:18 IST

ಮದ್ದೂರು: ‘ಕೀಳುಮಟ್ಟದ ರಾಜಕೀಯ ಪ್ರಚಾರದಿಂದ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೊರಬಂದು ಪಕ್ಷ ಸಂಘಟನೆಗೆ ಮುಂದಾಗಲಿ’ ಎಂದು ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಆಗ್ರಹಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಕೆ.ಟಿ.ಶ್ರೀಕಂಠೇಗೌಡರು, ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಪತಿ, ಮಾಜಿ ಶಾಸಕ ಎಂ.ಎಸ್.ಸಿದ್ದರಾಜು ಅವರ ಹೆಸರನ್ನು ಪ್ರಸ್ತಾಪಿಸಿರುವುದು ಅವರ ಹತಾಶೆಯ ಪ್ರತೀಕ.’ ಎಂದು ಖಂಡಿಸಿದ ಅವರು, ಈ ಬಗೆಗೆ ಹೆಚ್ಚಿನ ಮಾತುಕತೆಯಿದ್ದರೆ, ಕೆಟಿಎಸ್‌ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಸವಾಲು ಹಾಕಿದರು.

‘ನನ್ನ ಪತಿ ಎಂ.ಎಸ್.ಸಿದ್ದರಾಜು ಅವರ ಅಂತ್ಯಕ್ರಿಯೆ, ಉತ್ತರ ಕ್ರಿಯಾದಿ ಕಾರ್ಯಗಳನ್ನು  ಎಚ್‌.ಡಿ.ದೇವೇಗೌಡ ಕುಟುಂಬದವರೇ ಮಾಡಿದರೆಂಬ ಹೇಳಿಕೆ ಶುದ್ಧ ಸುಳ್ಳು. ಪತಿಯ ಉತ್ತರಕ್ರಿಯಾದಿ ಕಾರ್ಯ ಮಾಡಲಾಗದಷ್ಟು ಅಸಹಾಯಕತೆ ತಮ್ಮ ಕುಟುಂಬಕ್ಕೆ ಇಲ್ಲ. ಶ್ರೀಕಂಠೇಗೌಡರು ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದು ಕೂಡಲೇ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಅಂದು ಪತಿ ಅಗಲಿಕೆ ದುಃಖದಲ್ಲಿದ್ದ ನನಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಧೈರ್ಯ ತುಂಬಿ ಮುಂದೆ ನಿಂತು ವಿಧಿ ವಿಧಾನಗಳನ್ನು ಪೂರೈಸಿದರು. ಆದರೆ, ಈ ವಿಚಾರದಲ್ಲಿ ಕೆಟಿಎಸ್‌ ಅವರ ಮಧ್ಯಪ್ರವೇಶ ಅಗತ್ಯವಿಲ್ಲ’ ಎಂದರು.

‘ಕೆಲ ವರ್ಷಗಳಿಂದ ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ವಿವಿಧ ಚುನಾವಣೆಗಳ ವೇಳೆ ಕೆ.ಟಿ.ಶ್ರೀಕಂಠೇಗೌಡರು ನೀಡಿರುವ ಸಹಕಾರ ಮತ್ತು ಕೊಡಿಸಿರುವ ಮತಗಳು ಎಷ್ಟು.  ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರ ಪಕ್ಷ ನಿಷ್ಟೆ ಏನು. ಎಂಬುದು ಕಾರ್ಯಕರ್ತರಿಗೆ ಗೊತ್ತಿದೆ. ಯಾರ ಬಗ್ಗೆಯಾದರೂ ಟೀಕೆ ಮಾಡಬೇಕಾದರೆ ಅರಿತು ಮಾತನಾಡಬೇಕು’ ಎಂದು ಸಲಹೆ ನೀಡಿದರು.

‘ಎಚ್.ಡಿ.ದೇವೇಗೌಡ ಹಾಗೂ ಅವರ ಕುಟುಂಬದ ಬಗ್ಗೆ ತುಂಬು ಮನಸ್ಸಿನ ಗೌರವವಿದೆ. ನಮ್ಮ ಕುಟುಂಬದ ವಿಚಾರದಲ್ಲಿ ಅವರು ಈವರೆಗೂ ಎಲ್ಲೂ ಅಗೌರವ ಸೂಚಿಸಿಲ್ಲ. ಇಂತಹ ಸಂದರ್ಭದಲ್ಲಿ ಅವರ ಕುಟುಂಬದ ಬಗೆಗೆ ನಾನು ಎಲ್ಲೂ ಮಾತನಾಡಿಲ್ಲ. ಮುಂದೆಯೂ ಮಾತನಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ ಮಾತನಾಡಿ, ‘ಮಾಜಿ ಶಾಸಕ ದಿವಂಗತ ಎಂ.ಎಸ್‌.ಸಿದ್ದರಾಜು ಅವರು, 80ರ ದಶಕದಲ್ಲಿಯೇ  ಎಸ್.ಡಿ.ಜಯರಾಂ ಅವರಿಗೆ ಹೆಗಲುಕೊಟ್ಟು ಪಕ್ಷ ಕಟ್ಟಿ ಬೆಳಸಿದರು. ಅಂತವರ ಬಗ್ಗೆ ಲಘುವಾಗಿ ಮಾತನಾಡುವ ನೈತಿಕ ಹಕ್ಕು ಕೆಟಿಎಸ್‌ ಅವರಿಗಿಲ್ಲ’ ಎಂದು ಟೀಕಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು,  ಮುಖಂಡ ರಾದ ಕಾರ್ತಿಕ್‌ ಸಿದ್ದರಾಜು, ಸಿ.ರಾಜು, ಸಬ್ಬನಹಳ್ಳಿ ಕೃಷ್ಣ, ಧನಂಜಯ ಗಂಟಯ್ಯ, ಕದಲೂರು ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.