ADVERTISEMENT

ಕೆಆರ್‌ಎಸ್‌ ತವರಿನಲ್ಲೇ ಭೀಕರ ಜಲಕ್ಷಾಮ!

ಬಂಗಾರದೊಡ್ಡಿ ನಾಲೆ ಇದೇ ಮೊದಲ ಬಾರಿಗೆ ನೀರಿಲ್ಲದೇ ಭಣಗುಡುತ್ತಿದೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:38 IST
Last Updated 18 ಏಪ್ರಿಲ್ 2017, 6:38 IST
ಕೆಆರ್‌ಎಸ್‌ ತವರಿನಲ್ಲೇ ಭೀಕರ ಜಲಕ್ಷಾಮ!
ಕೆಆರ್‌ಎಸ್‌ ತವರಿನಲ್ಲೇ ಭೀಕರ ಜಲಕ್ಷಾಮ!   
ಶ್ರೀರಂಗಪಟ್ಟಣ:  ಪ್ರಸಿದ್ಧ ಕೆಆರ್‌ಎಸ್‌ ಅಣೆಕಟ್ಟೆಯನ್ನು ಹೊಂದಿರುವ, 10 ನಾಲೆಗಳು ಹುಟ್ಟಿ ಹೊರ ಜಿಲ್ಲೆಗೂ ನೀರು ಕೊಡುತ್ತಿರುವ ಸಮೃದ್ಧ  ಶ್ರೀರಂಗಪಟ್ಟಣ ಬರಗಾಲದ ಹೊಡೆತಕ್ಕೆ ಸಿಲುಕು ಬೆಂಗಾಡಿನಂತಾಗಿದೆ.
 
ಕೆಆರ್‌ಎಸ್‌ ಜಲಾಶಯದ ತಗ್ಗಿನಲ್ಲೇ ಉತ್ತಮ ಫಲ ಕೊಡುತ್ತಿದ್ದ ತೆಂಗಿನ ಮರಗಳು ಸುಳಿಗೂಡಿವೆ. 20–25 ವರ್ಷಗಳಿಂದ ಫಲ ಬಿಡುತ್ತಿದ್ದ ತೆಂಗಿನ ಮರಗಳು ಬರದ ತೀವ್ರತೆಗೆ ಒಣಗಿರುವುದು ರೈತರ ಬದುಕನ್ನು ಕುಗ್ಗಿಸಿದೆ.
 
ಕಂಠೀರವ ನರಸರಾಜ ಒಡೆಯರ್‌ (1638–59) ಅವರು ತೋಡಿಸಿದ ಬಂಗಾರ ದೊಡ್ಡಿ ನಾಲೆ ಇದೇ ಮೊದಲ ಬಾರಿಗೆ ನೀರಿಲ್ಲದೇ ಭಣಗುಡುತ್ತಿದೆ. ಇದರಿಂದಾಗಿ ಶ್ರೀರಂಗಪಟ್ಟಣ ಮತ್ತು ಗಂಜಾಂ ರೈತರ ಸಹಸ್ರಾರು ಎಕರೆ ಕೃಷಿ ಭೂಮಿ ಬೀಳು ಬಿದ್ದಿದೆ. 
 
ಚಿಕ್ಕದೇವರಾಯ ಒಡೆಯರ್‌ ಕಾಲದ ವಿರಿಜಾ ಮತ್ತು ಚಿಕ್ಕದೇವರಾಯಸಾಗರ (ಸಿಡಿಎಸ್‌) ನಾಲೆಗಳಲ್ಲಿ ಕೂಡ ನೀರಿಲ್ಲ. ವಿಶ್ವೇಶ್ವರಯ್ಯ, ರಾಜಪರಮೇಶ್ವರಿ, ರಾಮಸ್ವಾಮಿ ಸೇರಿದಂತೆ ಇತರ ನಾಲೆಗಳು ಇದ್ದೂ ಇಲ್ಲದಂತಾಗಿವೆ.ಮೇವು ದೊರೆಯದೇ ರೈತರು ತಮ್ಮ ಜಾನುವಾರುಗಳನ್ನು ‘ಅಗ್ಗದ ಬೆಲೆ’ಗೆ ಮಾರಾಟ ಮಾಡುವ ಸ್ಥಿತಿ ಬಂದಿದೆ. 
 
ಒಣ ಮೇವು ಕೂಡ ಸಿಗದ್ದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಯುಗಾದಿ ಆಚೆ– ಈಚೆ ಮುಂಗಾರು ಮಳೆ ಬೀಳಬಹುದು ಎಂಬ ರೈತರ ನಿರೀಕ್ಷೆ ಕೂಡ ಹುಸಿಯಾಗಿದೆ. 
 
‘ನನಗೆ ಬುದ್ಧೀ ತಿಳಿದಾಗಿನಿಂದ ಯಾವತ್ತೂ ಬಂಗಾರದೊಡ್ಡಿ ನಾಲೆ ಬತ್ತಿರಲಿಲ್ಲ. ಇದು ನದಿ ಒಡ್ಡಿನ ನಾಲೆಯಾದ್ದರಿಂದ ವರ್ಷದ ಎಲ್ಲ ದಿನಗಳಲ್ಲೂ ನೀರು ಹರಿಯುತ್ತಿತ್ತು. ತೆಂಗು, ಬಾಳೆ, ಕಬ್ಬು, ಭತ್ತ, ರಾಗಿ ಇತರ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯುತ್ತಿದ್ದೆವು. ಈಗ ದನ, ಕರುಗಳಿಗೂ ನೀರಿಲ್ಲದ ಪರಿಸ್ಥಿತಿ ಬಂದೊದಗಿದೆ’ ಎನ್ನುತ್ತಾರೆ ಗಂಜಾಂನ 75 ವರ್ಷ ರೈತ ನರಸಿಂಹೇಗೌಡ.
 
‘ವಾಡಿಕೆಯಷ್ಟು ಮುಂಗಾರು ಮಳೆ ಬೀಳದ ಕಾರಣ ತಾಲ್ಲೂಕಿನಲ್ಲಿ 1,005 ಹೆಕ್ಟೇರ್‌ನಷ್ಟು ಖುಷ್ಕಿ ಬೆಳೆ ನಷ್ಟವಾಗಿದೆ. ಹಿಂಗಾರು ಹಂಗಾಮಿನಲ್ಲಿ 2,555 ಹೆಕ್ಟೇರ್‌ ಬೆಳೆ ನಷ್ಟ ಉಂಟಾಗಿದೆ. ರಾಗಿ, ಅಲಸಂದೆ ಮತ್ತು ಹುರುಳಿ ಬೆಳೆ ನಷ್ಟವಾಗಿದೆ.
 
ಕುಡಿಯುವ ನೀರಿನ ಸಮಸ್ಯೆ: ಬರದ ತೀವ್ರತೆಗೆ ತಾಲ್ಲೂಕಿನ ಸಾಕಷ್ಟು ಕಡೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಕೆಆರ್‌ಎಸ್‌ ಜಲಾಶಯಕ್ಕೆ ಹತ್ತಿರದಲ್ಲೇ ಇರುವ ಬಸ್ತಿಪುರ ಗ್ರಾಮದಲ್ಲಿ ನೂರಾರು ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಯಿಸಿದರೂ ನೀರು ಬರುತ್ತಿಲ್ಲ. 
 
ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕಾವೇರಿ ನದಿಯ ದಡದಲ್ಲೇ ಇರುವ ಮಹದೇವಪುರ ಗ್ರಾಮದ ಜನರಿಗೆ ವಾರಕ್ಕೆ ಒಮ್ಮೆ ಮಾತ್ರ ನೀರು ಕೊಡಲಾಗುತ್ತಿದೆ. ಗಾಮನಹಳ್ಳಿ ಆಸುಪಾಸಿನ ಗ್ರಾಮಗಳಲ್ಲಿ ಮೇಲಿಂದ ಮೇಲೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. 
ಮಳೆ ಬೀಳುವುದು ತಡವಾದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಾಧ್ಯತೆ ಇದೆ.
ಗಣಂಗೂರು ನಂಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.