ADVERTISEMENT

ಕೆಆರ್‌ಎಸ್‌ ವ್ಯಾಪ್ತಿ ನಾಲೆಗಳಿಗೆ ಸದ್ಯಕ್ಕೆ ನೀರಿಲ್ಲ!

100 ಅಡಿ ತುಂಬುವವರೆಗೆ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸುವ ಸಂಭವ ಕಡಿಮೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 7:36 IST
Last Updated 22 ಜುಲೈ 2017, 7:36 IST

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯಕ್ಕೆ ಈ ಬಾರಿ ನಿರೀಕ್ಷೆಯಷ್ಟು ನೀರು ಹರಿದು ಬಾರದ ಕಾರಣ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಸದ್ಯಕ್ಕೆ ನೀರು ಹರಿಸುವ ಸಾಧ್ಯತೆಗಳು ಇಲ್ಲ.
ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ 15 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿರುವುದು ರೈತರಲ್ಲಿ ತುಸು ಹರ್ಷ ತಂದಿದ್ದರೂ ಜಲಾಶಯ 100 ಅಡಿ ತುಂಬುವವರೆಗೆ ಕಾವೇರಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸುವ ಸಂಭವ ಕಡಿಮೆ.

ಐಸಿಸಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳದ ಹೊರತು ನಾಲೆಗಳಿಗೆ ನೀರು ಹರಿಸುವ ಸಾಧ್ಯತೆ ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ. ಹಾಗಾಗಿ ಕಳೆದ ವರ್ಷದಂತೆ ಈ ಬಾರಿಯ ರೈತರು ಮುಂಗಾರು ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕು ಒಂದರಲ್ಲೇ ಪ್ರತಿ ವರ್ಷ 7,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಗೂ 4,500 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿತ್ತು.

ADVERTISEMENT

ಇಷ್ಟು ಹೊತ್ತಿಗೆ ಶೇ 35ರಿಂದ ಶೇ 40ರಷ್ಟು ಭತ್ತದ ನಾಟಿ ಕಾರ್ಯ ಮುಗಿಯಬೇಕಿತ್ತು. ನಾಲೆಗಳಿಗೆ ನೀರು ಹರಿಸದ ಕಾರಣ ಭತ್ತದ ಬೀಜದ ಒಟ್ಲು ಪಾತಿಯನ್ನೂ ರೈತರು ಸಿದ್ಧಗೊಳಿಸಿಲ್ಲ.
‘ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ ಸಂಗ್ರಹವಾಗಿರುವ ನೀರಿನಲ್ಲಿ 2.89 ಟಿಎಂಸಿ ಅಡಿಗಳಷ್ಟು ನೀರನ್ನು ಮಾತ್ರ ಕೃಷಿ ಉದ್ದೇಶಕ್ಕೆ ಬಳಸಬಹುದು. ಕೆಆರ್‌ಎಸ್‌ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸುವುದಾದರೆ ಈ ನೀರು ಒಂದು ಕಟ್ಟಿಗೂ ಸಾಲುವುದಿಲ್ಲ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರದಿಂದ ಮಳೆಯೂ ಕ್ಷೀಣಿಸಿದೆ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೆಆರ್‌ಎಸ್‌ ಜಲಾಶಯಕ್ಕೆ ಇನ್ನಷ್ಟು ನೀರು ಬಂದರೆ ಮುಂಗಾರು ಬೆಳೆಗೆ ನೀರು ಕೊಡುವಂತೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಮೇಲೆ ಒತ್ತಡ ತರುತ್ತೇನೆ. ಸಾಧ್ಯ ಆಗದಿದ್ದರೆ ಜನ, ಜಾನುವಾರುಗಳ ಕುಡಿಯುವ ಉದ್ದೇಶಕ್ಕಾದರೂ ನಾಲೆಗಳಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಇದೆ. ಕನಿಷ್ಠ 10 ದಿನಗಳ ಕಾಲವಾದರೂ ನಾಲೆಗಳಿಗೆ ನೀರು ಕೊಡಬೇಕಿದೆ.

ಹಾಗಾಗಿ ಶೀಘ್ರ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೋರುತ್ತೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರತಿಕ್ರಿಯಿಸಿದ್ದಾರೆ.
‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರು ಜಿಲ್ಲೆಗೆ ಮೇಲಿಂದ ಮೇಲೆ ಭೇಟಿ ನೀಡಿದರೂ ರೈತರ ಬಗ್ಗೆ ಕಳಕಳಿ ತೋರುತ್ತಿಲ್ಲ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ರೈತರ ಹಿತ ಕಾಯಬೇಕು ಎಂಬ ಇಚ್ಛಾಶಕ್ತಿ ಕಿಂಚಿತ್ತೂ ಇಲ್ಲ’ ಎಂದು ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೂರು ದಿನಗಳಿಂದ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ತಕ್ಷಣ ನೀರು ಹರಿಸಬೇಕು. ಜನ, ಜಾನುವಾರುಗಳಿಗಾದರೂ ನೀರು ಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಶುಕ್ರವಾರ ಕೆಆರ್‌ಎಸ್‌ ಜಲಾಶಯ 83 ಅಡಿಗಳಷ್ಟು ನೀರು ಇದೆ. 15,073 ಕ್ಯೂಸೆಕ್‌ ನೀರು ಹರಿದು ಬರುತ್ತಿತ್ತು.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 98.25 ಅಡಿಗಳಷ್ಟು ನೀರು ತುಂಬಿತ್ತು.
ಗಣಂಗೂರು ನಂಜೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.