ADVERTISEMENT

ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:35 IST
Last Updated 17 ಮಾರ್ಚ್ 2018, 9:35 IST

ನಾಗಮಂಗಲ: ಶಾಸಕ ಚಲುವರಾಯಸ್ವಾಮಿ ತಮ್ಮನ್ನು ತಾವೇ ಅಭಿವೃದ್ಧಿಯ ಹರಿಕಾರ ಎಂದು ಹೋದಲ್ಲಿ ಬಂದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಅವರೇ ಬಿರುದು ಕೊಟ್ಟುಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿ ಹರಿಕಾರ ಬಿರುದಿಗಿಂತ ದೊಡ್ಡ ಪ್ರಶಸ್ತಿಯನ್ನು ಜನರು ಕೊಡುತ್ತಾರೆ ಎಂದು ಜೆಡಿಎಸ್‌ ಮುಖಂಡ ಶಿವರಾಮೇಗೌಡ ಲೇವಡಿ ಮಾಡಿದರು.

ಅವರು ನಾಗಮಂಗಲ ತಾಲ್ಲೂಕಿನ ಹುಲಿಕೆರೆಯಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಶೇ 70 ಜನ ವ್ಯವಸಾಯವನ್ನೇ ನಂಬಿಕೊಂಡು ಕುಳಿತಿದ್ದಾರೆ. ಶಾಸಕರು ಅವರಿಗಾಗಿ ಏನು ಮಾಡಿದ್ದಾರೆ ಎಂಬುದು ಬಹಿರಂಗ ಚರ್ಚೆಯಾಗಬೇಕು. ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದಲೂ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಹೇಳಿದರು.

ADVERTISEMENT

ಮುಖಂಡ ಸುರೇಶ್‌ಗೌಡ ಮಾತನಾಡಿ, ಕುಮಾರಸ್ವಾಮಿ ಅವರು ಹೋದಲ್ಲೆಲ್ಲಾ ಜನ ಸಾಗರೋಪಾದಿಯಲ್ಲಿ ಸೇರಿ ಬೆಂಬಲ ನೀಡುತ್ತಿದ್ದಾರೆ. ಪಾಂಡವಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣದಲ್ಲಿ ಲಕ್ಷಾಂತರ ಜನ ಕುಮಾರಪರ್ವದ ಮೂಲಕ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದಾರೆ. ಅದರಂತೆ ಮಾರ್ಚ್‌ 30ರಂದು ನಡೆಯುವ ಕುಮಾರ ಪರ್ವದಲ್ಲಿ ನಾಗಮಂಗಲದಲ್ಲಿ ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್‌.ಅಪ್ಪಾಜಿಗೌಡ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಜವರೇಗೌಡ , ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.