ADVERTISEMENT

ಚಿರತೆ ದಾಳಿ: 5 ಮೇಕೆ, 4 ಕುರಿ ಬಲಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:11 IST
Last Updated 24 ಮೇ 2017, 7:11 IST

ಕಿಕ್ಕೇರಿ: ಹೋಬಳಿಯ ಮಾದಾಪುರ ಗ್ರಾಮದ ಬಳಿ ಇರುವ ಈಚಲುಗುಡ್ಡೆಕಾವಲು ಪ್ರದೇಶದಲ್ಲಿ ಸೋಮವಾರ ರಾತ್ರಿ ಚಿರತೆಯೊಂದು ಕುರಿಮಂದೆಯ ಮೇಲೆ ದಾಳಿ ನಡೆಸಿದ್ದು, 5 ಮೇಕೆ ಹಾಗೂ 4 ಕುರಿಗಳು ಬಲಿಯಾಗಿವೆ.

ಕುರಿಮಂದೆ ಶಿರಾ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಕುರಿಗಾಹಿ ಜೋಗಯ್ಯನ ಶಿವಮ್ಮ ಅವರಿಗೆ ಸೇರಿದವು. ಮಂದೆಯಲ್ಲಿದ್ದ ನಾಯಿಗಳು ಬೊಗಳಿದಾಗ ಎಚ್ಚರಗೊಂಡ ಶಿವಮ್ಮನ ಪರಿವಾರದವರು ಎದ್ದು ಗಲಾಟೆ ಮಾಡಿದಾಗ ಚಿರತೆ ಓಡಿ ಹೋಗಿದೆ.

ಶಿವಮ್ಮ ಗ್ರಾಮದಿಂದ ತಿಂಗಳ ಹಿಂದೆ ಸುಮಾರು 500 ಕುರಿ, ಮೇಕೆಗಳನ್ನು ಹೋಬಳಿ ಕೇಂದ್ರಕ್ಕೆ ತಂದಿದ್ದರು. ರೈತರ ಜಮೀನುಗಳಲ್ಲಿ ಕುರಿಗಳನ್ನು ಬಿಟ್ಟು ರೈತರು ನೀಡುವ ಹಣ, ಧಾನ್ಯಗಳನ್ನು ಸಂಗ್ರಹಿಸಿಕೊಂಡು ಮೂಲ ಗ್ರಾಮಕ್ಕೆ ತೆರಳಲು ಅಣಿಯಾಗಿದ್ದರು.

ADVERTISEMENT

ಸೋಮವಾರ ಈಚಲುಗುಡ್ಡೆ ಕಾವಲಿನಲ್ಲಿ ಕುರಿಗಳನ್ನು ಒಂದಡೆ ಸೇರಿಸಿ ಬಲೆ ಹಾಕಿ ವಿಶ್ರಾಂತಿಯಲ್ಲಿದ್ದರು. ಗುಡ್ಡಗಾಡು ಪ್ರದೇಶವಾಗಿದ್ದು, ಆಹಾರ, ನೀರಿಗಾಗಿ ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಇದೆ.

ಚಿರತೆ ಸೆರೆ ಹಿಡಿಯಲು ಬೋನಿನ ವ್ಯವಸ್ಥೆ ಹಾಗೂ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ರವೀಂದ್ರ ತಿಳಿಸಿದರು. ಪಶು ವೈದ್ಯಾಧಿಕಾರಿ ಡಾ.ಕಾರ್ತಿಕ್ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.