ADVERTISEMENT

ಜಲ ವಿವಾದ ‘ಕಾವೇರಿ’ದ ವರ್ಷ

ಬಸವರಾಜ ಹವಾಲ್ದಾರ
Published 31 ಡಿಸೆಂಬರ್ 2016, 5:42 IST
Last Updated 31 ಡಿಸೆಂಬರ್ 2016, 5:42 IST
ಜಲ ವಿವಾದ ‘ಕಾವೇರಿ’ದ ವರ್ಷ
ಜಲ ವಿವಾದ ‘ಕಾವೇರಿ’ದ ವರ್ಷ   

ಮಂಡ್ಯ: ಕಾವೇರಿ ನದಿ ನೀರಿನ ಸಮಸ್ಯೆ, ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ಬರ, ಸಚಿವ ಸ್ಥಾನ ಕಳೆದುಕೊಂಡ ಅಂಬರೀಷ್‌ ಸೇರಿದಂತೆ ರಾಷ್ಟ್ರ, ರಾಜ್ಯ ಗಮನ ಸೆಳೆದ ಹಲವು ಘಟನೆಗಳು 2016 ನೇ ಸಾಲಿನಲ್ಲಿ ದಾಖಲಾದವು.

ಹಲವು ವರ್ಷಗಳಿಂದ ಜಿಲ್ಲೆಯನ್ನು ಕಾಡುತ್ತಿರುವ ಕಾವೇರಿ ನದಿ ನೀರಿನ ವಿವಾದ ಈ ವರ್ಷ ತೀವ್ರಗೊಂಡಿತ್ತು. ಕಾವೇರಿ ನದಿ ನೀರಿಗಾಗಿ ತಿಂಗಳುಗಟ್ಟಲೇ ಹೋರಾಟ ಮಾಡಲಾಯಿತು. ತಮಿಳುನಾಡಿಗೆ ನೀರು ಬಿಡಬೇಕು ಎಂಬ ಸುಪ್ರೀಂಕೋರ್ಟ್‌ ಆದೇಶದಿಂದ ಹೋರಾಟ ತೀವ್ರಗೊಂಡಿತ್ತು.

ಕಾವೇರಿಗಾಗಿ ವಿಶೇಷ ಅಧಿವೇಶನ ಕರೆದದ್ದು, ಒಗ್ಗಟ್ಟಾಗಿ ರಾಜ್ಯ ಬಂದ್‌ಗೆ ಬೆಂಬಲ ನೀಡಿದ್ದು ವಿಶೇಷವಾಗಿತ್ತು. ಜಿಲ್ಲೆಯ ಕೆಆರ್ಎಸ್‌ ಅಣೆಕಟ್ಟೆ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗಿನ ಅತಿ ಕಡಿಮೆ ನೀರು ಸಂಗ್ರಹವಾದ ದಾಖಲೆಗೆ ಅಣೆಕಟ್ಟೆ ಸಾಕ್ಷಿಯಾಯಿತು.

ಜೆಡಿಎಸ್‌ಗೆ ಬಂಡಾಯದ ಬಿಸಿ
ಮಂಡ್ಯ ಜಿಲ್ಲೆ ಜೆಡಿಎಸ್‌ ಪಕ್ಷದ ಭದ್ರಕೋಟೆ ಎನಿಸಿಕೊಂಡಿದೆ. ಆ ಪಕ್ಷದ ಇಬ್ಬರು ಶಾಸಕರು ನಾಯಕರ ವಿರುದ್ಧ ಬಂಡಾಯ ಎದ್ದಿರುವುದು ಭದ್ರಕೋಟೆಯಲ್ಲಿ ಬಿರುಕು ಉಂಟು ಮಾಡಿದೆ.

ನಾಗಮಂಗಲ ಶಾಸಕ ಎನ್‌.ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಕ್ಷ ಅವರನ್ನು ಅಮಾನತ್ತಿನಲ್ಲಿಟ್ಟಿದೆ. ಶಿಸ್ತು ಸಮಿತಿ ವಿಚಾರಣೆ ನಡೆಸುತ್ತಿದೆ. ಇಬ್ಬರೂ ನಾಯಕರ ಮುಂದಿನ ನಡೆ ಏನು ಎಂಬುದು ಹೊಸ ವರ್ಷದಲ್ಲಿಯೂ ಕುತುಹೂಲ ಮೂಡಿಸಿದೆ.

ಸಚಿವ ಸ್ಥಾನ ಕಳೆದುಕೊಂಡ ಅಂಬರೀಷ್‌:
ಮಂಡ್ಯದ ಗಂಡು ಎಂದೇ ಕರೆಯಿಸಿಕೊಂಡಿರುವ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಂಬರೀಷ್‌ ಅವರು ಈ ವರ್ಷದ ಮಧ್ಯದಲ್ಲಿ ಸಚಿವ ಸ್ಥಾನ ಕಳೆದುಕೊಂಡರು.
ಸಚಿವ ಸ್ಥಾನ ಸರಿಯಾಗಿ ನಿರ್ವಹಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಕೈಬಿಡಲಾಯಿತು. ಇದರಿಂದ ಜಿಲ್ಲೆಯಲ್ಲಿ ಕೆಲವು ಕಡೆ ಪ್ರತಿಭಟನೆಗಳೂ ನಡೆದವು. ಕೋಪಗೊಂಡ ಅಂಬರೀಷ್‌ ಅವರು ಇತ್ತೀಚಿನವರೆಗೂ ಮಂಡ್ಯಕ್ಕೆ ಕಾಲಿಟ್ಟಿರಲಿಲ್ಲ.

ಅಂಬರೀಷ್‌ ಅವರನ್ನು ಸೇರಿ ಈ ವರ್ಷ ಜಿಲ್ಲೆಯು ಮೂವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಕಂಡಿದೆ. ಅಂಬರೀಷ್‌ ಅವರನ್ನು ಕೈಬಿಟ್ಟ ನಂತರ ಕೆಲಕಾಲ ಸಚಿವ ಡಿ.ಕೆ. ಶಿವಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈಗ ಎಂ. ಕೃಷ್ಣಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.

ಕಸಾಪ, ಕರ್ನಾಟಕ ಸಂಘದ ಚುನಾವಣೆ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಜಿಲ್ಲಾ ಘಟಕದ ಅಧ್ಯಕ್ಷರಾಗಿ ರವಿಕುಮಾರ ಚಾಮಲಾಪುರ ಆಯ್ಕೆ ಯಾದರು. ಕರ್ನಾಟಕ ಸಂಘಕ್ಕೂ ಮೊದಲ ಬಾರಿಗೆ ಚುನಾವಣೆ ನಡೆದು, ಪ್ರೊ. ಜಯಪ್ರಕಾಶಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

ಮರ್ಯಾದೆಗೇಡು ಹತ್ಯೆ
ತಾಲ್ಲೂಕಿನ ತಿಮ್ಮನಹೊಸೂರಿನಲ್ಲಿ ನಡೆದ ಮೋನಿಕಾ ಮರ್ಯಾದೆ ಗೇಡು ಹತ್ಯೆ ಪ್ರಕರಣ ರಾಜ್ಯದ ಗಮನ ಸೆಳೆಯಿತು. ಈ ಪ್ರಕರಣ ಜಿಲ್ಲೆಗೆ ಕೆಟ್ಟ ಹೆಸರು ತಂದುಕೊಟ್ಟಿತು. ಬೇರೆ ಜಾತಿಯ ಯುವಕ ನೊಂದಿಗಿನ ಪ್ರೀತಿ ಕೊಲೆ ಯಲ್ಲಿ ಅಂತ್ಯವಾಯಿತು. ತಂದೆ ಹಾಗೂ ಸಂಬಂಧಿಕರೇ ಕೊಲೆ ಮಾಡಿದ ಆರೋಪದ ಮೇಲೆ ಕೆಲ ದಿನ ಜೈಲೂ ಸೇರಿದ್ದರು. ಈಗ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಅನ್ಯಧರ್ಮದ ಯುವಕನೊಂದಿಗೆ ನಗರದ ವೈದ್ಯರೊಬ್ಬರ ಮಗಳಾದ ಆಶಿತಾ ಮದುವೆಯಾಗಿದ್ದು, ರಾಜ್ಯಮಟ್ಟದ ಸುದ್ದಿಯಾಗಿ ಎಲ್ಲರ ಗಮನ ಸೆಳೆಯಿತು.

ಆರಂಭವಾಗದ ಮೈಷುಗರ್
ಈ ವರ್ಷದ ಆರಂಭದಿಂದಲೂ ಮೈಷು ಗರ್ ಕಾರ್ಖಾನೆ ಆರಂಭಿಸಲಾಗುವುದು ಎಂಬ ಮಾತುಗಳನ್ನು ಸಕ್ಕರೆ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಹೇಳುತ್ತಲೇ ಬಂದರು. ಆದರೆ, ಕಾರ್ಖಾನೆ ಮಾತ್ರ ಈ ವರ್ಷ ಆರಂಭ ವಾಗಲೇ ಇಲ್ಲ. ಮುಂದಿನ ವರ್ಷ ವಾದರೂ ಆರಂಭವಾಗುವುದೇ ಕಾದು ನೋಡಬೇಕು.

ಏಳು ತಾಲ್ಲೂಕುಗಳು ಬರ ಪೀಡಿತ 
ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸ ಲಾಗಿದೆ. ₹ 105 ಕೋಟಿ ಬೆಲೆ ಬಾಳುವ ಕಬ್ಬು, ಭತ್ತ, ರಾಗಿ ಬೆಳೆ ನಾಶವಾಗಿದೆ. ಹಿಂಗಾರಿನ ಬೆಳೆಗೆ ನೀರಿಲ್ಲದಂತಾಗಿದೆ.

ಜಾನುವಾರುಗಳಿಗೂ ಮೇವಿನ ಕೊರತೆ ಯಾಗುವ ಲಕ್ಷಣಗಳು ಇವೆ. ಕುಡಿಯುವ ನೀರಿಗೂ ಪರದಾಡ ಬೇಕಾದ ಸ್ಥಿತಿ ಎದುರಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ 125ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ರಾಜ್ಯದಲ್ಲಿಯೇ ಹೆಚ್ಚಾಗಿತ್ತು. ಈ ವರ್ಷವೂ  ಈಗಾಗಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಮುಂದಿನ ದಿನಗಳಲ್ಲಿ ಹಿಂದಿನ ವರ್ಷದ ಪರಿಸ್ಥಿತಿ ಮರು ಕಳುಹಿಸಿದರಲಿ ಎಂಬ ಆಶಯ ಜಿಲ್ಲೆಯ ಜನತೆಯದ್ದಾಗಿದೆ.

ರಮ್ಯಾ ಹೇಳಿಕೆ ವಿವಾದ 
ಪಾಕಿಸ್ತಾನ ದಲ್ಲಿಯೂ ಒಳ್ಳೆಯವರಿದ್ದಾರೆ ಎಂದು ಮಾಜಿ ಸಂಸದೆ ರಮ್ಯಾ ಅವರು ಹೇಳಿದ್ದ ಮಾತು ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರಮಟ್ಟದ ನಾಯಕರೂ ಇದಕ್ಕೆ ಪ್ರತಿಕ್ರಿಯಿಸಿದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಠಾಣೆಯೊಂದರಲ್ಲಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಸರ್ಕಾರಿ ಮಹಾ ವಿದ್ಯಾಲಯಕ್ಕೆ ವಿ.ವಿ ಸ್ಥಾನಮಾನ: ಮಂಡ್ಯ ನಗರದಲ್ಲಿರುವ ಸರ್ಕಾರಿ ಕಾಲೇಜಿಗೆ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾನಮಾನ ದೊರಕಿರು ವುದರಿಂದ ಮೊಟ್ಟಮೊದಲ ಬಾರಿ ಜಿಲ್ಲೆಗೆ ವಿಶ್ವವಿದ್ಯಾಲ ಯವೊಂದು ದೊರಕಿದೆ. ಮಹಿಳಾ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೆಂದ್ರಗಳಿದ್ದವು. ಸ್ವತಂತ್ರ ವಿಶ್ವವಿದ್ಯಾಲಯ ಇರುವುದಿಲ್ಲ.

ಧ್ವನಿ ಸುರುಳಿ ಬಿಡುಗಡೆ:  ಮೊದಲ ಬಾರಿಗೆ ಮಂಡ್ಯದಲ್ಲಿ ಇಬ್ಬರು ರಾಜಕೀಯ ನಾಯಕರ ಪುತ್ರರು ನಾಯಕರಾಗಿರುವ ಚಲನಚಿತ್ರಗಳ ಧ್ವನಿಸುರುಳಿ ಬಿಡುಗಡೆಗೆ ಮಂಡ್ಯ ಸಾಕ್ಷಿಯಾಯಿತು.

ಎನ್‌.ಚಲುವರಾಯ ಸ್ವಾಮಿ ಅವರ ಪುತ್ರ ಸಚಿನ್‌ ಅವರ ‘ಹ್ಯಾಪಿ ಬರ್ತಡೇ’ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರ ‘ಜಾಗ್ವಾರ್‌’ ಚಲನಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮಗಳು ನಡೆದವು. ಮಂಡ್ಯ ತಾಲ್ಲೂಕಿನ ನೊದೆಕೊಪ್ಪಲುನಲ್ಲಿ ಚಿತ್ರೀಕರಣವಾದ ‘ತಿಥಿ’  ಚಿತ್ರವು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು.

ಎಂಎಲ್‌ಸಿ ಚುನಾವಣೆ 
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಿತು. ಜನವರಿ ತಿಂಗಳಿನಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದ ಎನ್‌. ಅಪ್ಪಾಜಿಗೌಡ ಪ್ರಮಾಣ ವಚನ ಸ್ವೀಕರಿಸಿದರು. ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಜಿಲ್ಲೆಯ ಕೆ.ಟಿ.ಶ್ರೀಕಂಠೇಗೌಡ ಅವರು ಆಯ್ಕೆಯಾಗುವ ಮೂಲಕ ಎರಡನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸಿದರು.

ನಗರಸಭೆ ಅಧ್ಯಕ್ಷರ ಆಯ್ಕೆ, ಅವಿಶ್ವಾಸ ಮಂಡನೆ 
ನಗರಸಭೆಗೆ ಮೂರು ಬಾರಿ ಆಯ್ಕೆಯಾಗಿ ಅಧ್ಯಕ್ಷ ಹುದ್ದೆಯಿಂದ ವಂಚಿತರಾಗಿದ್ದ ಹೊಸಹಳ್ಳಿ ಬೋರೇಗೌಡರ ಅಧ್ಯಕ್ಷರಾಗಬೇಕು ಎಂಬ ಆಸೆ ಈಡೇರಿದ ವರ್ಷ ಇದಾಗಿದೆ. ಆದರೆ, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಅವಿಶ್ವಾಸ ಮಂಡನೆಯೂ ಆಗಿದೆ. ಮುಂದಿನ ವರ್ಷದ ಮೊದಲ ವಾರದಲ್ಲಿ ಅವರ ಭವಿಷ್ಯ ನಿರ್ಧಾರವಾಗಲಿದೆ.

ಜಿ.ಪಂ, ತಾ.ಪಂ ಚುನಾವಣೆ
ಜಿಲ್ಲೆಯಲ್ಲಿ ನಡೆದ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಬಹುತೇಕ ಕಡೆ ಜೆಡಿಎಸ್‌ ಜಯಭೇರಿ ಬಾರಿಸಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜೆ.ಪ್ರೇಮಕುಮಾರಿ ಆಯ್ಕೆಯಾಗಿದ್ದಾರೆ.

ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ, ಒಳಾಂಗಣ ಕ್ರೀಡಾಂಗಣ ಕಾಮಗಾರಿಗಳು ಈ ವರ್ಷವೂ ಪೂರ್ಣಗೊಳ್ಳಲಿಲ್ಲ. ಮಂಡ್ಯದಲ್ಲಿ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ, ರಾಜ್ಯಮಟ್ಟದ ಈಜು ಚಾಂಪಿಯನ್‌ಷಿಪ್‌, ಚೆಸ್‌ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಕಾರು ಚಾಲಕ ರಮೇಶ್‌ ಆತ್ಮಹತ್ಯೆ
ವರ್ಷದ ಕೊನೆಯಲ್ಲಿ ಕೆಎಎಸ್‌ ಅಧಿಕಾರಿ ಭೀಮಾನಾಯ್ಕ ಅವರ ಕಾರು ಚಾಲಕ ರಮೇಶ್‌ ಅವರು ಬರೆದಿಟ್ಟ ‘ಡೆತ್‌ನೋಟ್’ ಪತ್ರ ಜೋರಾಗಿ ಸದ್ದು ಮಾಡಿತು.
ಕಾವೇರಿ ವಿವಾದ ವಿಚಾರಣೆಗೆ ಅಂಗೀಕಾರ:  ರಾಜ್ಯ ಸರ್ಕಾರವು ಐ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಏಳು ವರ್ಷಗಳ ನಂತರ ವಿಚಾರಣೆಗೆ ಅಂಗೀಕರಿಸಿರುವುದು ಜಿಲ್ಲೆಯ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ನ್ಯಾಯಾಲಯದಲ್ಲಿ ರಾಜ್ಯದ ಪರ ತೀರ್ಪು ಬಂದರೆ ಜಿಲ್ಲೆಯ ಜನತೆಗೆ ಒಂದಷ್ಟು ನೆಮ್ಮದಿ ಸಿಗಬಹುದು.

ತಲ್ಲಣ ಮೂಡಿಸಿದ ನೋಟು ರದ್ದು
ಮಂಡ್ಯ: ವರ್ಷದ ಕೊನೆಯಲ್ಲಿ ನಡೆದ ಎರಡು ಘಟನೆಗಳು ಜಿಲ್ಲೆಯಲ್ಲಿ ತಲ್ಲಣ ಉಂಟು ಮಾಡಿದವು. ನ. 8ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ₹ 500 ಹಾಗೂ 1000 ಮುಖಬೆಲೆಯ ನೋಟು ಚಲಾವಣೆ ರದ್ದುಗೊಳಿಸಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಗಿತ್ತು. ಬ್ಯಾಂಕ್‌, ಎಟಿಎಂಗಳ ಮುಂದೆ ಜನರು ಸಾಲು ನಿಂತಿದ್ದರು. ಬೆಲ್ಲ, ಎಳನೀರು, ರೇಷ್ಮೆ ಬೆಲೆ ಕಡಿಮೆಯಾಗಿದ್ದರಿಂದ ರೈತರೂ ತೊಂದರೆ ಎದುರಿಸಬೇಕಾಯಿತು.

ಆತಂಕ ಮೂಡಿಸಿದ ತೊಪ್ಪನಹಳ್ಳಿ ಘಟನೆ: ಮದ್ದೂರು ತಾಲ್ಲೂಕಿನ ತೊಪ್ಪನಹಳ್ಳಿಯಲ್ಲಿ ಗ್ರಾ.ಪಂ. ಚುನಾವಣಾ ದ್ವೇಷದ ಹಿನ್ನೆಲೆಯಲ್ಲಿ ನಡೆದ ನಂದೀಶ್‌, ಮುತ್ತುರಾಜು ಅವರ ಕೊಲೆ ಘಟನೆ ಅಚ್ಚರಿಗೆ ಕಾರಣವಾಗಿದೆ. ರಾಜಕೀಯ ದ್ವೇಷ ಸಾವಿನಲ್ಲಿ ಅಂತ್ಯವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT