ADVERTISEMENT

ಜಾಗೃತಿಗೆ ರಂಗಭೂಮಿ ಉತ್ತಮ ಮಾರ್ಗ

ರಂಗಾಯಣದ ಯುವ ಸಂಚಾರಿ ರಂಗ ಘಟಕದಿಂದ ‘ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 7:11 IST
Last Updated 24 ಮಾರ್ಚ್ 2017, 7:11 IST

ಮಂಡ್ಯ: ಶೋಷಣೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ರಂಗಭೂಮಿ ಉತ್ತಮ ಮಾರ್ಗವಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಎನ್‌.ಸವಿತಾ ಹೇಳಿದರು.

ನಗರದಲ್ಲಿ ಗುರುವಾರ ನೆಲದನಿ ಬಳಗ, ಮೈಸೂರು ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ  ಮಹಿಳಾ ದಿನ ಅಂಗವಾಗಿ ಏರ್ಪಡಿಸಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ರಚಿಸಿದ ನಾಟಕಗಳು ದೃಶ್ಯರೂಪಕ್ಕೆ ಬರುತ್ತಿಲ್ಲ ಎಂಬ ಕೊರಗಿತ್ತು. ಈಚಿನ ದಿನಗಳಲ್ಲಿ ಮಹಿಳೆಯರೂ ನಾಟಕ ರಚನೆ, ಅಭಿನಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಟಿವಿ ಬಂದ ಮೇಲೆ ಜನರು ಒಂದೆಡೆ ಸೇರುವುದು ಕಡಿಮೆಯಾಗಿದೆ. ಗಟ್ಟಿ ಇರುವ ನಾಟಕಗಳ ಪ್ರದರ್ಶನಕ್ಕೆ ಮುಂದಾಗಬೇಕು. ಯುವಕರನ್ನು ರಂಗಭೂಮಿಯತ್ತ ಸೆಳೆಯುವ ಕೆಲಸ ಆಗಬೇಕು ಎಂದು ಹೇಳಿದರು.

ಮೈಸೂರು ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಯುವ ಕಲಾವಿದರಿಗಾಗಿಯೇ ಮಿನಿ ರೆಪರ್ಟರಿ ಆರಂಭಿಸಲಾಗಿದೆ. ಅವರು ನಟಿಸುತ್ತಿರುವ ನಾಟಕಗಳನ್ನು ರಾಜ್ಯದ 22 ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಪ್ರಮೀಳಾ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹಿಂದಿನಿಂದಲೂ ಬೀದಿ ನಾಟಕ ಹಾಗೂ ರಂಗಭೂಮಿ ಬಹಳ ಸಮರ್ಥವಾಗಿ ಮಾಡಿಕೊಂಡಿವೆ ಎಂದು ಹೇಳಿದರು. ಜನರಲ್ಲಿ ಬದಲಾವಣೆ ತರುವ ಶಕ್ತಿ ರಂಗಭೂಮಿಗೆ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.

ನೆಲದನಿ ಬಳಗದ ಟಿ.ಎಸ್‌. ರುಕ್ಮಿಣಿ ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಳಗದ ನಿರ್ದೇಶಕಿ ಎಂ.ಎನ್‌. ಉಮಾದೇವಿ, ಮಹಿಳಾ ಮುನ್ನಡೆಯ ಪೂರ್ಣಿಮಾ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಅಂಜಲಿ, ನೀನಾ ಪಾಟೀಲ ಉಪಸ್ಥಿತರಿದ್ದರು. ಮೈಸೂರು ರಂಗಾಯಣದ ಯುವ ಸಂಚಾರಿ ರಂಗ ಘಟಕದವರು ‘ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.