ADVERTISEMENT

ಜಾತಿ ಸಂಕೋಲೆಯಿಂದ ಹೊರಬನ್ನಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2016, 7:09 IST
Last Updated 30 ಡಿಸೆಂಬರ್ 2016, 7:09 IST

ಮಂಡ್ಯ: ಜಾತಿ ಸಂಕೋಲೆಯಿಂದ ಹೊರ ಬಂದು, ಕುವೆಂಪು ಅವರ ಮಾರ್ಗ, ಆಶಯದಂತೆ ನಡೆಯಬೇಕಿದೆ ಎಂದು ಸಂಸ್ಕೃತಿ ಚಿಂತಕಿ ಲೀಲಾ ಅಪ್ಪಾಜಿ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಗುರುವಾರ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಕುವೆಂಪು ತತ್ವ, ಸಿದ್ಧಾಂತ ಹಾಗೂ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವುಗಳನ್ನು ಪಾಲಿಸುವ ಮೂಲಕ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಆಗಲೇ ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದರು.

ವಿಶ್ವಕ್ಕೆ ವಿಶ್ವ ಮಾನವ ಸಂದೇಶ ಸಾರುವ ಮೂಲಕ ಕುವೆಂಪು ಅವರು ಸಾಮಾಜಿಕ ಸಮಾನತೆ ಸಾರಿದ್ದರು. ಪ್ರಸ್ತುತ ಸಮಾಜಕ್ಕೆ ವಿದ್ಯಾವಂತರಾದ ನಾವುಗಳು ಅವರ ಸಂದೇಶ ಸಾರುವ ಅವಶ್ಯಕತೆಯಿದೆ. ಪ್ರೀತಿ, ವಿಶ್ವಾಸ, ಪ್ರೇಮ, ತಾಳ್ಮೆ, ಸಹನೆಯಂತಹ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್ ಮಾತನಾಡಿ, ಜಾತಿ, ಧರ್ಮ ಎಂದು ಕಚ್ಚಾಡುವುದನ್ನು ಬಿಡಬೇಕು ಎಂದು ಕುವೆಂಪು ಅವರು ಹೇಳಿದ್ದಾರೆ. ಸಮಾಜದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಮುಂದಾಗಬೇಕು ಎಂದರು.

ಜಿ.ಪಂ. ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ಸಿ.ಕೆ. ರವಿಕುಮಾರ್‌, ಬಿ.ಆರ್‌. ಪೂರ್ಣಿಮಾ, ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ಚಂದ್ರಹಾಸ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.