ADVERTISEMENT

ಜಾನುವಾರುಗಳೊಂದಿಗೆ ನೀರಿಗಾಗಿ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ *ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 8:24 IST
Last Updated 13 ಜನವರಿ 2017, 8:24 IST
ಮಂಡ್ಯ: ಜನ, ಜಾನುವಾರುಗಳಿಗೆ ಕುಡಿಯಲು ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಗುರುವಾರ ರಾಜ್ಯ ರೈತ ಸಂಘ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
 
ಎತ್ತು, ಕುರಿ ಹಾಗೂ ಮೇಕೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು. ನಂತರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
 
ರಾಜ್ಯ ಸರ್ಕಾರವೇ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ನಾಲೆಗಳಿಗೆ ನೀರು ಹರಿಸದ್ದರಿಂದ ಅಂತರ್ಜಲ ಮಟ್ಟದಲ್ಲಿ ಕುಸಿತವಾಗಿದೆ. ಕೊಳವೆಬಾವಿಗಳಲ್ಲಿಯೂ ನೀರಿಲ್ಲದಂತಾಗಿದೆ. ಜಾನುವಾರುಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕೂಡಲೇ ನೀರು ಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
 
ಜಿಲ್ಲೆಯಲ್ಲಿ ಹಲವಾರು ಗ್ರಾಮಗಳ ಜನರು, ಜಾನುವಾರುಗಳು ಕುಡಿಯುವ ನೀರಿಗಾಗಿ ನಾಲೆಗಳನ್ನೇ ಅವಲಂಬಿಸಿದ್ದಾರೆ. ನೀರು ಹರಿಸುವ ಮೂಲಕ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
 
ಮುಖಂಡರಾದ ಕೆ.ಎಸ್. ನಂಜುಂಡೇಗೌಡ, ಶಂಭೂನಹಳ್ಳಿ ಸುರೇಶ್‌, ಬಿ. ಬೊಮ್ಮೇಗೌಡ, ಕೋಣಸಾಲೆ ನರಸರಾಜು, ಹನಿಯಂಬಾಡಿ ನಾಗರಾಜು, ಅರುಣಜ್ಯೋತಿ, ಜಿ.ಎಸ್‌. ಲಿಂಗಪ್ಪಾಜಿ, ಜಿ.ಎಸ್‌. ಶಂಕರ್‌, ನಾಗಣ್ಣ, ನವೀನ್‌ ಮತ್ತಿತರರು ಭಾಗವಹಿಸಿದ್ದರು.
 
ಕ್ರಮಕ್ಕೆ ಸೂಚನೆ
ಪಾಂಡವಪುರ: ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚಿಸಿದರು. 
 
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
 
ಕಿರು ನೀರು ಸರಬರಾಜು ಯೋಜನೆ, ಬೋರ್‌ವೆಲ್‌ ಹಾಗೂ ಇತರ ಮೂಲಗಳಿಂದ ನೀರನ್ನು ಒದಗಿಸಬೇಕು. ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ನೀರು ದೊರಕಿದರೆ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಇಂತಿಷ್ಟು ಹಣ ನೀಡಿ ನೀರನ್ನು ಪಡೆಯಬೇಕು. ಅಗತ್ಯವಿದ್ದಡೆ ಟ್ಯಾಂಕರ್‌ ಮೂಲಕವು ನೀರನ್ನು ಒದಗಿಸಬೇಕು. ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉಂಟಾಗಬಾರದು ಎಂದು ಪಿಡಿಒಗಳಿಗೆ ಅವರು ಸೂಚಿಸಿದರು.
 
ನೀರು ಪೂರೈಕೆಗೆ ಆಗ್ರಹ 
ಕಿಕ್ಕೇರಿ: ಸಮೀಪದ ಲಿಂಗಾಪುರ ಗ್ರಾಮದಲ್ಲಿ ತ್ವರಿತವಾಗಿ ನೀರು ಪೂರೈಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. 
 
ಗುರುವಾರ ದಲಿತ ಕೇರಿಯ ಮಹಿಳೆಯರು ನೀರಿನ ತೊಂಬೆ ಮುಂದೆ ಜಮಾಯಿಸಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.
 
ಮೂರು ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನೀರಿಗಾಗಿ ಅಕ್ಕಪಕ್ಕದ ಜಮೀನುಗಳಲ್ಲಿ ಗೋಗರೆಯುವಂತಾಗಿದೆ. ಜಮೀನು ಮಾಲೀಕರು ಕುಡಿಯುವ ನೀರು ನೀಡಲು ಮುಖ ಹಿಂಡುತ್ತಾರೆ. ಶುದ್ಧ ಕುಡಿಯುವ ನೀರಿಲ್ಲದೆ ರೋಗರುಜಿನಗಳಿಂದ ಬಳಲುವಂತಾಗಿದೆ ಎಂದು ದೂರಿದರು. 
 
ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ, ಅಧ್ಯಕ್ಷರು ಇಲ್ಲ. ನಮ್ಮ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ. ಶಾಲೆ–ಕಾಲೇಜು ವೇಳೆಗೆ ಅಡುಗೆ ತಯಾರಿ ಮಾಡುವುದೇ ಕಷ್ಟಕರವಾಗಿದೆ. ಕೂಡಲೇ ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಶಾಸಕರ ಮನೆ ಮುಂದೆ, ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. 
 
ಸ್ತ್ರೀಶಕ್ತಿ ಸ್ವಸಹಾಯ ಸಂಘದ ಭಾಗ್ಯಮ್ಮ, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.