ADVERTISEMENT

ಟನ್ ಕಬ್ಬಿಗೆ ₹ 3,500 ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 5:30 IST
Last Updated 18 ನವೆಂಬರ್ 2017, 5:30 IST

ಮಂಡ್ಯ: ಪ್ರತಿ ಟನ್‌ ಕಬ್ಬಿಗೆ ₹ 3,500 ದರ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ರೈತಸಂಘದ ಕಾರ್ಯಕರ್ತರು ಮೈಷುಗರ್‌ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.

ಸಕ್ಕರೆ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕಬ್ಬಿನ ದರ ಹೆಚ್ಚಾಗುತ್ತಿಲ್ಲ. ಸಕ್ಕರೆ ಲಾಬಿಯಿಂದಾಗಿ ಕಾರ್ಖಾನೆಗಳು ಅಪಾರ ಲಾಭ ಗಳಿಸುತ್ತಿದ್ದರೂ ಅದನ್ನು ರೈತರಿಗೆ ಹಂಚುತ್ತಿಲ್ಲ. ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ.

ಹೀಗಾಗಿ ನ್ಯಾಯಯುತವಾಗಿ ಕಬ್ಬನ ದರವನ್ನು ನಿಗದಿ ಮಾಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನಗಳ ಒಳಗೆ ರೈತರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಪ್ರತಿಭಟೆನಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ಮುಖಂಡರಾದ ಬೊಮ್ಮೇಗೌಡ, ಜಿ.ಎಸ್‌.ಲಿಂಗಪ್ಪಾಜಿ, ಕೋಣಸಾಲೆ ನಾಗರಾಜು, ಲತಾ ಶಂಕರ್‌, ಪಿ.ಕೆ.ನಾಗಣ್ಣ, ಹಲ್ಲೇಗೆರೆ ಹರೀಶ್‌, ಎಂ.ಎಸ್‌.ವಿಜಯಕುಮಾರ್‌ ಹಾಜರಿದ್ದರು.

ಚಾಂಷುಗರ್‌ಗೆ ಮುತ್ತಿಗೆ
ಭಾರತೀನಗರ: ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಟನ್ ಕಬ್ಬಿಗೆ ₹ 3,500 ನಿಗದಿ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಇಲ್ಲಿನ ಚಾಂಷುಗರ್‌ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಿಂದ ಮೆರವಣಿಗೆ ಮೂಲಕ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗುತ್ತ ಕಾರ್ಖಾನೆಯ ಆಡಳಿತ ಕಚೇರಿ ಎದುರು ಪ್ರತಿಭಟನಾ ಧರಣಿ ಆರಂಭಿಸಿದರು.

ಸಕ್ಕರೆ ದರ ಕೆಜಿಗೆ ₹ 40 ಆಗಿದೆ. ಅಲ್ಲದೆ ಕಾರ್ಖಾನೆಯಲ್ಲಿ ಸಹ ವಿದ್ಯುತ್ ಘಟಕ, ಡಿಸ್ಟಿಲರಿ, ಗೊಬ್ಬರ ಘಟಕ ಇದೆ. ಕಾರ್ಖಾನೆ ಲಾಭದಾಯಕವಾಗಿದ್ದು, ರೈತರಿಗೆ ಹಣ ನೀಡಲು ಮೀನಮೇಷ ಏಣಿಸುತ್ತಿದೆ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೋಣಸಾಲೆ ನರಸರಾಜು ಕಿಡಿಕಾರಿದರು.

ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಮಾಡಿದೆ. ಅದು ಅವೈಜ್ಞಾನಿಕದಿಂದ ಕೂಡಿದೆ. ಕೂಡಲೇ ಎಫ್‌ಆರ್‌ಪಿ ದರ ₹ 3500 ನಿಗದಿ ಮಾಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನದಲ್ಲಿ ಹಣ ಪಾವತಿ ಮಾಡಬೇಕು. ತಪ್ಪಿದಲ್ಲಿ ಬಡ್ಡಿ ಸೇರಿಸಿ ನೀಡಬೇಕು ಎಂದರು.

ಕಾರ್ಖಾನೆಯ ಯಾರ್ಡ್‌ನಲ್ಲಿ ಎತ್ತಿನಗಾಡಿಗಳಿಗೆ ನೀರು, ನೆರಳು ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ರೈತರಿಗೆ ಕ್ಯಾಂಟಿನ್ ವ್ಯವಸ್ಥೆ ಮಾಡಿ, ಕಾರ್ಮಿಕರಿಗೆ ನೀಡುವ ರೀತಿ ರಿಯಾಯಿತಿ ದರದಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಕಾರ್ಖಾನೆಯ ಉಪಾಧ್ಯಕ್ಷ ಎಸ್.ಬ್ರಿಟೋ ಮಾತನಾಡಿ, ಕೇಂದ್ರ ಸರ್ಕಾರ ಎಫ್ಆರ್‌ಪಿ ದರ ನಿಗದಿಗೊಳಿಸಿದೆ. ಅದನ್ನು ತಿರಸ್ಕರಿಸಿ ನಾವು ದರ ನಿಗದಿಗೊಳಿಸಲು ಸಾಧ್ಯವಿಲ್ಲ. 20 ದಿನಗಳ ಕಾಲಾವಕಾಶ ನೀಡಿದರೆ ರೈತರು ಸಲ್ಲಿಸಿದ ಬೇಡಿಕೆಗಳನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ನಂತರ ಅಂತಿಮ ದರ ನಿಗದಿಗೊಳಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎ.ಶಂಕರ್, ಕಾರ್ಯದರ್ಶಿ ಶೆಟ್ಟಹಳ್ಳಿ ರವಿಕುಮಾರ್, ಭಾರತೀನಗರ ಘಟಕದ ಅಧ್ಯಕ್ಷ ಅಣ್ಣೂರು ಸಿದ್ದೇಗೌಡ, ಮುಖಂಡರಾದ ಜಿ.ಎಸ್. ಲಿಂಗಪ್ಪಾಜಿ, ವರದರಾಜು, ಯರಗನಹಳ್ಳಿ ರಾಮಕೃಷ್ಣ, ಅಂಚೇದೊಡ್ಡಿ ಸಿದ್ದೇಗೌಡ, ಕೆ.ಸಿ. ಮಾದೇಗೌಡ, ಬೊಪ್ಪಸಮುದ್ರ ಸ್ವಾಮಿ, ದೇವರಾಜು, ಬೋರೇಗೌಡ, ಪುಟ್ಟಸ್ವಾಮಿ, ರಾಜು, ಸಿದ್ದೇಗೌಡ, ಚಿಕ್ಕಮರೀಗೌಡ, ವೆಂಕಟೇಶ್, ಪುಟ್ಟಲಿಂಗು, ದಯಾನಂದ್, ಚನ್ನಯ್ಯ ಪಾಲ್ಗೊಂಡಿದ್ದರು.

* * 

ರೈತರು ಮಳೆ, ಚಳಿ ಲೆಕ್ಕಿಸದೆ ಕಬ್ಬು ಬೆಳೆ ಬೆಳೆಯುತ್ತಾರೆ. ಆದರೆ, ಪ್ರತಿ ವರ್ಷವು ಹೋರಾಟ ನಡೆಸಿ ಕಬ್ಬಿನ ಹಣ ಪಡೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಇದು ನಮ್ಮ ದುರ್ದೈವ
ಕೋಣಸಾಲೆ ನರಸರಾಜು
ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.