ADVERTISEMENT

ದಸರಾ ಉತ್ಸವ: ಸ್ಕೂಟರ್‌ ಏರಿ ಸಿದ್ಧತೆ ಪರಿಶೀಲಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 7:30 IST
Last Updated 23 ಸೆಪ್ಟೆಂಬರ್ 2017, 7:30 IST

ಶ್ರೀರಂಗಪಟ್ಟಣ: ಸೆ. 24ರಿಂದ 3 ದಿನಗಳ ಕಾಲ ಪಟ್ಟಣದಲ್ಲಿ ನಡೆಯಲಿರುವ ದಸರಾ ಉತ್ಸವದ ಹಿನ್ನೆಲೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಸ್ಕೂಟರ್‌ ನಲ್ಲಿ ಕುಳಿತು ಪಟ್ಟಣದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.

ಸ್ಕೂಟರ್‌ ಏರಿ ಹೊರಟ ರಮೇಶ ಬಂಡಿಸಿದ್ದೇಗೌಡ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವ ಕಿರಂಗೂರು ವೃತ್ತದ ಬಳಿಯ ಬನ್ನಿಮಂಟಪಕ್ಕೆ ತಹಶೀಲ್ದಾರ್‌ ಕೆ. ಕೃಷ್ಣ ಜತೆ ತೆರಳಿ ಸ್ವಚ್ಛತೆ, ಸುಣ್ಣ–ಬಣ್ಣ, ಉತ್ಸವಕ್ಕೆ ಪುಷ್ಪಾರ್ಚನೆ ಮಾಡುವ ಅಟ್ಟಣಿಗೆ ನಿರ್ಮಾಣ, ವಾಹನ ನಿಲುಗಡೆ ಸ್ಥಳ, ಆನೆಗಳ ನಿಲುಗಡೆ ಸ್ಥಳ, ಬನ್ನಿ ಪೂಜೆ ವ್ಯವಸ್ಥೆ ಮೊದಲಾದ ಕೆಲಸಗಳ ಬಗ್ಗೆ ಚರ್ಚಿಸಿದರು.

ಬನ್ನಿ ಮಂಟಪದ ಬಳಿ ಪ್ರಕಾಶಮಾನ ವಿದ್ಯುತ್‌ ದೀಪಗಳನ್ನು ಹಾಕಿಸುವಂತೆ ಸ್ಥಳೀಯರು ಕೋರಿಕೆ ಸಲ್ಲಿಸಿದ ಮೇರೆಗೆ ಸಂಜೆಯೊಳಗೆ ದೀಪಗಳನ್ನು ಹಾಕಿಸುವ ಭರವಸೆ ನೀಡಿದರು. ಅಲ್ಲಿಂದ ವೆಲ್ಲೆಸ್ಲಿ ಸೇತುವೆ ಬಡಾವಣೆಗೆ ತೆರಳಿದ ಶಾಸಕ ಮೂಲ ಸೌಕರ್ಯ ಕುರಿತು ಪುರಸಭೆ ಸದಸ್ಯ ಎಂ.ಎಲ್‌.ದಿನೇಶ್‌ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು.

ADVERTISEMENT

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಸಿದ್ಧಗೊಳ್ಳುತ್ತಿರುವ ದಸರಾ ಉತ್ಸವದ ಸಾಂಸ್ಕೃತಿಕ ವೇದಿಕೆ ಬಳಿಗೆ ತೆರಳಿದ ರಮೇಶ ಬಂಡಿಸಿದ್ದೇಗೌಡ ಶನಿವಾರ ಸಂಜೆಯೊಳಗೆ ವೇದಿಕೆ ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು. ಪಟ್ಟಣದ ರಾಜ ಬೀದಿ, ಪೂರ್ಣಯ್ಯ ಬೀದಿ, ಪುರಸಭೆ ವೃತ್ತ, ಅಂಬೇಡ್ಕರ್‌ ವೃತ್ತ ಮೊದಲಾದೆಡೆ ಸ್ಕೂಟರ್‌ನಲ್ಲಿ ಕುಳಿತೇ ಉತ್ಸವದ ಸಿದ್ಧತೆ ಪರಿಶೀಲನೆ ನಡೆಸಿದರು.

‘ದಸರಾ ಉತ್ಸವ ಸಾಗುವ ಮಾರ್ಗದ ಉದ್ದಕ್ಕೂ ಹಸಿರು ತೋರಣ, ವಿದ್ಯುತ್‌ ದೀಪ ಅಳವಡಿಸಿ ಸಿಂಗರಿಸಬೇಕು. ಸರ್ಕಾರಿ ಕಚೇರಿಗಳನ್ನು ಕೂಡ ವಿದ್ಯುತ್‌ ದೀಪಗಳಿಂದ ಅಲಂಕರಿಸಬೇಕು. ಸ್ವಚ್ಛತೆಗೆ ಭಂಗ ಬರದಂತೆ ಎಚ್ಚರ ವಹಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್‌.ವಾಸು, ಪುರಸಭೆ ಸದಸ್ಯರಾದ ಎಂ.ಎಲ್‌. ದಿನೇಶ್‌, ಟಿ.ಕೃಷ್ಣ, ಮುಖಂಡ ಬಿ.ಎಂ.ಶ್ರೀನಿವಾಸ್‌, ಕೃಷಿಕ ಸಮಾಜ ಜಿಲ್ಲಾ ನಿರ್ದೇಶಕ ಬಿ.ಎಂ.ಸುಬ್ರಹ್ಮಣ್ಯ ಇದ್ದರು.

₹ 5.35 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ: ಕೇಂದ್ರ ಸರ್ಕಾರದ ಐ.ಪಿ.ಡಿ.ಎಸ್‌. (ಇಂಟಿಗ್ರೇಟೆಡ್‌ ಪವರ್‌ ಡೆವಲಪ್‌ ಮೆಂಟ್‌ ಸ್ಕೀಂ)ಯೋಜನೆಯ ₹ 5.35 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಪಟ್ಟಣದಲ್ಲಿ ಚಾಲನೆ ನೀಡಿದರು. ‘ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್‌ ತಂತಿಗಳ ಬದಲಾವಣೆ, ಶಿಥಿಲ ವಿದ್ಯುತ್‌ ಕಂಬಗಳ ಬದಲಾವಣೆ, ಹೆಚ್ಚುವರಿ ಕಂಬಗಳ ಅಳವಡಿಕೆ, ತಂತಿ ಸರಿಪಡಿಸುವುದು, ಹೆಚ್ಚುವರಿ ಪರಿವರ್ತಕಗಳ ಅಳವಡಿಕೆ, ಬೀದಿ ದೀಪಗಳಿಗೆ ಹೆಚ್ಚುವರಿ ಸರ್ಕಿಟ್‌ ಅಳವಡಿಕೆ ಮೊದಲಾದ ಕೆಲಸಗಳನ್ನು ಐ.ಪಿ.ಡಿ.ಎಸ್‌. ಯೋಜನೆಯ ಅಡಿ ಕೈಗೆತ್ತಿಕೊಳ್ಳಲಾಗುತ್ತಿದೆ.ಉದ್ದೇಶಿತ ಕಾಮಗಾರಿ ವಾರದ ಒಳಗೆ ಶುರುವಾಗಲಿದೆ. ಕಾಲಮಿತಿಯಲ್ಲಿ ಕೆಲಸ ಮುಗಿಯಲಿದೆ’ ಎಂದು ಅವರು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಸ್‌.ಲೋಕೇಶ್‌, ಸದಸ್ಯ ಎಂ.ಎಲ್‌.ದಿನೇಶ್‌, ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸಮೂರ್ತಿ, ಎಇ ಮಧುಸೂದನ್‌, ಪರಿಸರ ಎಂಜಿನಿಯರ್‌ ವಿಜಯ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.