ADVERTISEMENT

ದಾಸ ಸಾಹಿತ್ಯದಲ್ಲಿದೆ ಸಾಮಾಜಿಕ ಹಿತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 6:52 IST
Last Updated 9 ಜನವರಿ 2017, 6:52 IST

ಶ್ರೀರಂಗಪಟ್ಟಣ: ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದು, ಜೀವನ ಮೌಲ್ಯಗಳು ತುಂಬಿತುಳುಕುತ್ತಿರುವ ದೇಸಿ ಸಂಸ್ಕೃತಿಯನ್ನು ಮರೆಯುತ್ತಿದೆ ಎಂದು ಬೆಂಗಳೂರಿನ ಅಮ್ಮ ವಿಶ್ವಂಭರ್‌ ಡಿವೈನ್‌ ಯೋಗ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷೆ ಯೋಗೇಶ್ವರಿ ಅಮ್ಮ ತೇಜಸ್ವಿನಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸುಬ್ರಹ್ಮಣ್ಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕನಕದಾಸ, ಪುರಂದರದಾಸ ಮತ್ತು ದೇವರ ದಾಸಿಮಯ್ಯ ಅವರ 17ನೇ ಆರಾಧನಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಿದೆ. ಸಮಾಜದ ಅಂಕು–ಡೊಂಕುಗಳ ಮೇಲೆ ಬೆಳಕು ಚೆಲ್ಲಿ ಭಕ್ತಿ, ಭಾವದ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ ಎಂದರು.

ಕನಕ, ಪುರಂದರ ಮತ್ತು ದೇವರ ದಾಸಿಮಯ್ಯ ಆರಾಧನಾ ಸೇವಾ ಟ್ರಸ್ಟ್‌ ಅಧ್ಯಕ್ಷ ಕುಲಾವಿ ಮಹೇಶ್‌ಶಾಸ್ತ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಳತೆ, ಸತ್ಯಸಂದತೆ, ಸ್ತ್ರೀ ಸಮಾನತೆಗೆ ಒತ್ತು ನೀಡುವ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಕುರಿತ ಗೋಷ್ಠಿ, ಚರ್ಚೆಗಳು ನಿರಂತರ ನಡೆಯಬೇಕು ಎಂದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆರ್‌.ರಂಗಧಾಮಯ್ಯ, ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಆರ್‌. ರವಿಶಂಕರ್‌, ವಕೀಲ ಎಲ್‌. ನಾಗರಾಜು ಇತರರು ಇದ್ದರು. ಬೆಂಗಳೂರು, ಮೈಸೂರು, ಮಂಡ್ಯ ಇತರ ಕಡೆಗಳಿಂದಲೂ ಜನ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ, ವಿದುಷಿ ಇಂದ್ರಾಣಿ ಅನಂತರಾಮ್‌ ಮತ್ತು ತಂಡ ಸಂಗೀತ ಸುಧೆಯನ್ನೇ ಹರಿಸಿತು. ಪುಷ್ಪಾ, ಚಂದ್ರಕಾ, ಶಶಿರೇಖಾ, ವಿದ್ಯಾ, ಕ್ಷಮಾ, ಸುಜಾತಾ, ಗಿರಿಜಾ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.