ADVERTISEMENT

ದುರಾಸೆಯಿಂದ ಅಂತರ್ಜಲ ಕುಸಿತ

ತಳಗವಾದಿ ಗ್ರಾಮದ ಕೆರೆಯಂಗಳದಲ್ಲಿ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:01 IST
Last Updated 23 ಮಾರ್ಚ್ 2017, 6:01 IST

ಮಳವಳ್ಳಿ: ಮಾನವನ ದುರಾಸೆಯಿಂದ ಅಂತರ್ಜಲ ಕುಸಿತ ಕಂಡು, ಪ್ರಸ್ತುತ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕ ಉಪಾಧ್ಯಕ್ಷೆ ಕೆ.ಎಸ್‌.ವಿಮಲಾ ತಿಳಿಸಿದರು.

ತಾಲ್ಲೂಕಿನ ತಳಗವಾದಿ ಗ್ರಾಮದ ಕೆರೆಯಂಗಳದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿಶ್ವಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭೂತಾಯಿಯ ಒಡಲನ್ನು ಮನಸೊ ಇಚ್ಛೆ ಕೊರೆದು ಮುಂದಿನ ಪೀಳಿಗೆಗೆ ನೀರೇ ಇಲ್ಲದಂತಾಗಿದೆ. ನಿಯಮ ಮೀರಿ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆಯಿಸಿ ಭೂಗರ್ಭವನ್ನು ನಾಶಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಂತರ್ಜಲ ವೃದ್ಧಿಗಾಗಿ ಗ್ರಾಮೀಣ ಪ್ರದೇಶದಲ್ಲಿರುವ ಕೆರೆ–ಕಟ್ಟೆಗಳನ್ನು ಉಳಿಸಬೇಕಿದೆ. ಗಿಡಮರಗಳನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು ಎಂದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕ ಅಧ್ಯಕ್ಷೆ ದೇವಿ ಮಾತನಾಡಿ, ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸುನೀತಾ, ಮಂಜುಳಾ, ಪ್ರೇಮಾ, ವರಲಕ್ಷ್ಮಿ, ಸರಿತಾ, ಕಾಮಾಕ್ಷಿ, ಕೆಂಪಮ್ಮ, ಪ್ರೇಮಾ, ರೂಪಾ, ವಿಜಯಾ, ಪಿಡಿಒ ರುದ್ರಯ್ಯ ಇದ್ದರು.
ಒಂದು ವಾರದಿಂದ ತಳಗವಾದಿ ಕೆರೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 150ಕ್ಕೂ ಹೆಚ್ಚು ಕೂಲಿಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಲ್ಲೇ ಮಹಿಳಾ ದಿನಾಚರಣೆ ಹಾಗೂ ವಿಶ್ವಜಲ ದಿನಾಚರಣೆ ನಡೆದದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT