ADVERTISEMENT

ದೇಗುಲಗಳು ಸಾಂಸ್ಕೃತಿಕ ಕೇಂದ್ರಗಳಾಗಲಿ

ಮಹಾಲಕ್ಷ್ಮಿ ದೇವಾಲಯ ಉದ್ಘಾಟನೆ: ಕೇಂದ್ರ ಸಚಿವ ಸದಾನಂದಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:11 IST
Last Updated 15 ಮೇ 2017, 7:11 IST
ಭಾರತೀನಗರ: ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟರು.
ಸಮೀಪದ ತಿಟ್ಟಮೇಲನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ಮಹಾಲಕ್ಷ್ಮೀ ಅಮ್ಮನವರ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
 
‘ಜನತೆ ಧರ್ಮದ ಹಾದಿಯಲ್ಲಿ ನಡೆಯುವಂತಾಗಬೇಕು. ಧರ್ಮದ ಹಾದಿಯಲ್ಲಿ ನಡೆದರೇ ಭಗವಂತ ಭಕ್ತನೆಡೆಗೆ ಬರುವುದರಲ್ಲಿ ಸಂಶಯವಿಲ್ಲ’ ಎಂದರು.
‘ಗ್ರಾಮಗಳು ಒಗ್ಗಟಾಗಿ ಅಭಿವೃದ್ದಿ ಕೆಲಸಗಳನ್ನು ಮಾಡಿ ಕೊಂಡರೇ ಯಾವುದೇ ಸರಕಾರ ಬೇಕಾಗಿಲ್ಲ. ಮಂಡ್ಯ ಜಿಲ್ಲೆಯ ಜನ ಸ್ವಾಭಿಮಾನಿಗಳು.
 
ಇಡೀ ದೇಶವೇ ಒಮ್ಮೆ ತಿರುಗುವಂತೆ ಮಾಡುವ ಶಕ್ತಿ ಅವರಲ್ಲಿದೆ. ಜಿಲ್ಲೆಯ ಜನ ಸಕ್ಕರೆ ಅಷ್ಟೇ ಸಿಹಿ ಸ್ವಭಾವ ಹೊಂದಿದ್ದಾರೆ. ಇವರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ’ ಎಂದು ಹೇಳಿದರು.  
 
ವಿಶ್ವ ಒಕ್ಕಲಿಗ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿ ಮಾತನಾಡಿದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. 
 
ಡಾಟಿ ಸದಾನಂದಗೌಡ,  ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕಿ ಪ್ರಭಾವತಿ ಜಯರಾಮ್‌,  ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ, ಅಂಬೇಡ್ಕರ್‌ ಅಬಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಮಲ್ಲಾಜಮ್ಮ, ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕ ಡಾ. ಮಹದೇವು, ಡಾ. ಅಂಜನಪ್ಪ, ತಾ.ಪಂ. ಸದಸ್ಯ ಗಿರೀಶ್, ಡಾ.ವಿ.ಟಿ. ವೆಂಕಟೇಶ್ ಪಾಲ್ಗೊಂಡಿದ್ದರು.
****
‘ರಾಜ್ಯದ ರೈತರಿಗೆ ಸಿ.ಎಂ ದ್ರೋಹ’
ರೈತರ ಸಾಲ ಮನ್ನಾ ಮಾಡದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದ್ರೋಹವೆಸಗುತ್ತಿದೆ ಎಂದು    ಸದಾನಂದಗೌಡ ಹೇಳಿದರು.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಾಲ್ಕು ಬಾರಿ ರೈತರ ಸಾಲಮನ್ನಾ ಮಾಡಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ  ರೈತರ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಸಿದ್ದರಾಮಯ್ಯ  ಅವರಿಂದ ರೈತರ ಸಾಲ ಮನ್ನಾ ಮಾಡಲು  ಏಕೆ ಸಾಧ್ಯವಾಗಿಲ್ಲ’ ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಿದ್ದು, ವಿವಿಧ ಪಕ್ಷಗಳ ನಾಯಕರ ದಂಡೇ  ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದೆ. ಬೃಹತ್‌ ಪಕ್ಷಾಂತರ ಪರ್ವ ನಡೆಯಲಿದೆ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದಿಂದ ಬೇಸತ್ತಿದ್ದಾರೆ. ಸಿದ್ದರಾಮಯ್ಯ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲ’ ಎಂದು ಟೀಕಿಸಿದರು.

‘ಮಂಡ್ಯ ಜಿಲ್ಲೆಯ ಉಸ್ತುವಾರಿ ನನ್ನ ಹೆಗಲಿಗೆ ಬಂದಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆದೇಶದಂತೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯತ್ತ ಹೆಚ್ಚು ಒತ್ತು ನೀಡುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೂ ಖಾತೆ ತೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಷುಗರ್ ಉಳಿವಿಗೆ ನೂರಾರು ಕೋಟಿ ಬಿಡುಗಡೆ ಮಾಡಿದ್ದೆ’ ಎಂದರು. ಪಕ್ಷದಲ್ಲಿ ಯಾವುದೇ ಕಲಹ  ಇಲ್ಲ.  ಆಂತರಿಕ ಕಿತ್ತಾಟಕ್ಕೆ ಜನತೆ ಕಿವಿಗೊಡಬೇಡಿ ಯಡಿಯೂರಪ್ಪ, ಈಶ್ವರಪ್ಪ ನಾವೆಲ್ಲ ಒಂದೇ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT