ADVERTISEMENT

ನಿವೇಶನಗಳಿಗೆ ಖಾತೆ ಮಾಡಿಕೊಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:38 IST
Last Updated 13 ಏಪ್ರಿಲ್ 2017, 6:38 IST

ಮಳವಳ್ಳಿ: ಪಟ್ಟಣದ ಸಿದ್ದಾರ್ಥನಗರ ಬಡಾವಣೆ ಬಳಿಯಲ್ಲಿರುವ ನಿವೇಶನಗಳ ಹಕ್ಕುಪತ್ರಗಳನ್ನು ಹಲವು ವರ್ಷಗಳ ಹಿಂದೆಯೇ ನೀಡಿದ್ದು, ಅದಕ್ಕೆ ಖಾತೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಪುರಸಭೆ ಕೆಲ ಸದಸ್ಯರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ರಿಯಾಜಿನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಮೆಹಬೂಬ್‌ಪಾಷ, ‘ಸಿದ್ದಾರ್ಥನಗರದಲ್ಲಿ 1986ರಲ್ಲಿ 115 ಮಂದಿಗೆ ನಿವೇಶನ ವಿತರಿಸಿ ಹಕ್ಕುಪತ್ರ ನೀಡಲಾಗಿದ್ದು, ಕೇವಲ ನಾಲ್ಕು ಮಂದಿಗೆ ಮಾತ್ರ ಖಾತೆ ಮಾಡಿಕೊಡಲಾಗಿದೆ. ಉಳಿದವರಿಗೆ ಯಾವಾಗ ಖಾತೆ ಮಾಡಿಕೊಡುತ್ತೀರಿ’ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸದಸ್ಯ ಮಾಯಣ್ಣ, ಮಹೇಶ್‌ಕುಮಾರ್, ರಾಜಣ್ಣ,ರಮೇಶ್ ದನಿಗೂಡಿಸಿದರು.ಸದಸ್ಯ ಕಿರಣ್‌ಶಂಕರ್‌, ‘ಮೂಲ ಖಾತೆದಾರರು ಹಾಗೂ ನ್ಯಾಯಾಲಯದ ಆದೇಶದ ಮೇರೆಗೆ ಖಾತೆ ಮಾಡಲಾಗಿದೆ’ ಎಂದರು.

ADVERTISEMENT

‘ಇದಕ್ಕೆ ಸಂಬಂಧಿಸಿದಂತೆ ಮುಂದಿನ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷ ರಿಯಾಜಿನ್ ಉತ್ತರಿಸಿದರು. ಸದಸ್ಯ ಎಂ.ಎಸ್.ರಮೇಶ್, ‘ನಲ್ಲಿಯಲ್ಲಿ ಕುಡಿಯುವ ನೀರು ಬಿಟ್ಟಾಗ ಉಳ್ಳವರು ನೇರವಾಗಿ ಮುಖ್ಯಲೈನ್‌ಗೆ ಮೋಟರ್ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೆಲ ಮನೆಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ನಿಯಂತ್ರಣ ಮಾಡಿ’ ಎಂದು ಒತ್ತಾಯಿಸಿದರು. ಇದಕ್ಕೆ ಉಮೇಶ್‌, ಮಹೇಶ್‌ಕುಮಾರ್ ಧ್ವನಿಗೂಡಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಪ್ರತಿಕ್ರಿಯಿಸಿ, ‘ಈ ಬಗ್ಗೆ ಹಿಂದೆಯೇ ಆಟೊದಲ್ಲಿ ಸಾರಲಾಗಿತ್ತು. ಮತ್ತೊಮ್ಮ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸದಸ್ಯರೆ ಹೆಚ್ಚಿನ ಸಹಕಾರ ನೀಡಬೇಕು’ ಎಂದರು.ನಂತರ ಕೆಲವು ಕ್ರಿಯಾಯೋಜನೆ ಹಾಗೂ ಟೆಂಡರ್ ಕಾಮಗಾರಿಗೆ ಅನುಮೋದನೆ ನೀಡಲಾಯಿತು.ಪುರಸಭೆ ಉಪಾಧ್ಯಕ್ಷೆ ಜಿ.ವಿ.ಸುಮಾ, ಮುಖ್ಯಾಧಿಕಾರಿ ಎಸ್‌.ಡಿ. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.