ADVERTISEMENT

ನೌಕರರಿಗೆ ಹೆಚ್ಚುವರಿ ವೇತನ ನೀಡಿ

ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ; ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 4:53 IST
Last Updated 28 ಡಿಸೆಂಬರ್ 2016, 4:53 IST

ಮಂಡ್ಯ: ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಹೆಚ್ಚುವರಿ ವೇತನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ನಗರದ ಅರಣ್ಯ ಇಲಾಖೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.

ಇಲಾಖೆಯ ದಿನಗೂಲಿ ನೌಕರರ ಅನ್ಯಾಯ ಸರಿಪಡಿಸಿ ಅವರಿಗೆ ಸೇವಾ ಭದ್ರತೆ ನೀಡಬೇಕು. ಇಲಾಖೆಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಹಾಗೂ ಸೇವೆಯಲ್ಲಿ ಮುಂದುವರಿಯುತ್ತಿರುವ ನೌಕರರಿಗೆ ಹೆಚ್ಚುವರಿ ವೇತನ ನೀಡಬೇಕು. ಕೇಂದ್ರ ಕಚೇರಿ ನಿಗದಿಪಡಿಸಿರುವ ಆದೇಶದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ವೇತನ ಪಾವತಿಯಲ್ಲೂ ನೌಕರರಿಗೆ ಅನ್ಯಾಯ ಮಾಡಲಾಗಿದೆ. ವಿವಿಧ ವಲಯಗಳಲ್ಲಿ ದರಪಟ್ಟಿಯಂತೆ ಸಂಬಳ ಪಾವತಿಸದೆ ಸುಳ್ಳು ವೋಚರ್‌ ನೀಡುವ ಮೂಲಕ ಗುತ್ತಿಗೆದಾರರಿಂದ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ. ಇದರಿಂದ ದಿನಗೂಲಿ ನೌಕರರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ಕೆ.ಆರ್‌.ಪೇಟೆ ವಲಯ ಅರಣ್ಯದಲ್ಲಿ ನೌಕರರ ವೇತನವನ್ನು ಒಂದು ವರ್ಷ ದಿಂದ ಕಡಿತಗೊಳಿಸಿ ನೀಡಲಾಗುತ್ತಿದೆ. ಹೀಗೆ ಕಡಿತಗೊಳಿಸಲು ಯಾರು ನಿರ್ದೇಶನ ನೀಡಿದ್ದಾರೆ ಎಂಬುದನ್ನು ತಿಳಿಸಬೇಕು. ಜತೆಗೆ ಕಡಿತಗೊಳಿಸಿರುವ ವೇತನವನ್ನು ವಾಪಸ್ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅದಿನಿಯಮದಡಿ ಸಕ್ರಮಾತಿಗೊಳ್ಳಲು ಒಂಬತ್ತು ಜನರನ್ನು ಗುರುತಿಸಲಾಗಿದೆ. ಇದರಲ್ಲಿ ಮೂರು ಜನರಿಗೆ ಮಾತ್ರ ಸೌಲಭ್ಯ ಸಿಗುತ್ತಿದ್ದು, ಇನ್ನುಳಿದ ನೌಕರರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಎಸ್‌.ಮೋಹನ್‌, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಕಾರ್ಯಾಧ್ಯಕ್ಷ ಶ್ರೀನಿವಾಸ್‌, ಭಾಗ್ಯಮ್ಮ, ಧನಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.