ADVERTISEMENT

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ

ಅಂಬರೀಷ್‌ಗೆ ಟಿಕೆಟ್‌; ರವಿಕುಮಾರ್‌ ಬೆಂಬಲಿಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 9:54 IST
Last Updated 18 ಏಪ್ರಿಲ್ 2018, 9:54 IST

ಮಂಡ್ಯ: ‘ಚುನಾವಣಾ ಯುದ್ಧಭೂಮಿಯಲ್ಲಿ ನಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ, ಯುದ್ಧ ಶತ ಸಿದ್ಧ. ಕಾಂಗ್ರೆಸ್‌ ಪಕ್ಷ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ನೀಡಿದರೆ ಸಂಧಾನಕ್ಕೆ ಬರುತ್ತೇನೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ಗಣಿಗ ಪಿ.ರವಿಕುಮಾರ್‌ಗೌಡ ಹೇಳಿದರು.

ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಗಣಿಗ ರವಿ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು.

‘ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಂಬರೀಷ್‌ ತಲೆ ಎತ್ತಿ ನಡೆಯುವಂತೆ ಸಹಾಯ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ಇಂದು ನೀವೇ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ನ್ಯಾಯವಲ್ಲ. ಚಿತ್ರನಟರಾದ ನೀವು ಮಂಡ್ಯ ಕ್ಷೇತ್ರ ಬಿಟ್ಟು 223 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲಬಹುದು. ನಾನು ಇಲ್ಲಿ ಸ್ಪರ್ಧಿಸಿದರೆ ಮಾತ್ರ ನಮ್ಮ ಕ್ಷೇತ್ರದ ಜನರು ನನ್ನ ಕೈಹಿಡಿಯುತ್ತಾರೆ. ಸ್ಪರ್ಧಿಸುವುದೇ ಆದರೆ ನಿಮ್ಮ ಸ್ವಂತ ಕ್ಷೇತ್ರ ಮದ್ದೂರಿನಿಂದ ಸ್ಪರ್ಧೆ ಮಾಡಿ. ಇದು ನಾನು ಹುಟ್ಟಿ, ಬೆಳೆದ ಕ್ಷೇತ್ರವಾಗಿದೆ. ನನ್ನ ಕ್ಷೇತ್ರ ಬಿಟ್ಟುಕೊಡಿ, ನನಗೆ ಸ್ಪರ್ಧಿಸಲು ಅವಕಾಶ ಕೊಡಿ. ಕಾಂಗ್ರೆಸ್‌ನಿಂದ ಅವಕಾಶ ಮಾಡಿಕೊಡಿ. ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ನಿಮ್ಮಿಂದ ಒಂದು ಪೈಸೆ ಪಡೆಯದೆ ಪ್ರತಿಯೊಂದು ಗ್ರಾಮಗಳಿಗೆ ಹೋಗಿ ಜನರನ್ನು ಸಂಘಟಿಸಿ ನಿಮ್ಮ ಗೆಲುವಿಗೆ ಕಾರಣವಾಗಿದ್ದೇನೆ. ನನ್ನ ಋಣ ನಿಮ್ಮ ಮೇಲಿದೆ’ ಎಂದು ಹೇಳಿದರು.

ADVERTISEMENT

‘ನೀವು ಮಂಡ್ಯದಲ್ಲಿ ಸ್ಪರ್ಧಿಸಿದರೆ ನಾನು ನಿಮಗೆ ಒಂದು ಮತ ಹಾಕುತ್ತೇನೆ. ಆದರೆ ನಾನು ಸ್ಪರ್ಧೆ ಮಾಡಿದರೆ ನಿಮ್ಮಿಂದ ನನಗೆ ಏನೂ ಸಿಗುವುದಿಲ್ಲ. ನಿಮ್ಮ ಹಿಂಬಾಲಕರು ನಿಮಗೆ ಕೇವಲ 50 ಮತಗಳನ್ನು ಹಾಕಿಸಲು ಸಮರ್ಥರಾಗಿಲ್ಲ. ಅವರನ್ನು ನಂಬಿ ಸ್ಪರ್ಧೆ ಮಾಡಿದರೆ ನಿಮ್ಮ ಸೋಲು ಖಚಿತವಾಗುತ್ತದೆ. ಕ್ಷೇತ್ರದಲ್ಲಿ ನಾನು ಮಾಡಿದ ಕಾರ್ಯಗಳನ್ನು ಬೆಂಬಲಿಸಿ ಸಾಕಷ್ಟು ಹಿತೈಷಿಗಳಿದ್ದಾರೆ. ನಿಮ್ಮ ಕೆಲವು ಮುಖಂಡರು ಸರ್ಕಾರದ ಬಿಲ್‌ಗಾಗಿ ಕಾಯುತ್ತಿದ್ದಾರೆ. ಅವರಿಗೆ ₹ 10 ಕೋಟಿ ಬಿಲ್ ಬರಬೇಕಾಗಿದೆ. ಅದು ತಮ್ಮ ಕೈ ತಪ್ಪಿ ಹೋಗಬಹುದು ಎಂಬ ಭಯದಿಂದ ಈ ಸಭೆಗೆ ಅವರು ಹಾಜರಾಗಿಲ್ಲ’ ಎಂದರು.

‘ಕ್ಷೇತ್ರದಲ್ಲಿ ಸಂಚಾರ ಮಾಡಿ ಮತದಾರರ ಅಭಿಪ್ರಾಯ ಕೇಳಿದಾಗ ಅಂಬರೀಷ್ ಜನರ ಕೈಗೆ ಸಿಗುವುದಿಲ್ಲ. ಅವರು ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂದು ಹೆಚ್ಚು ಜನರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನನಗೆ ಬಿ.ಫಾರಂನ್ನು ಕೊಡಿ, ಗೆದ್ದು ತೋರಿಸುತ್ತೇನೆ. ಕೆಪಿಸಿಸಿ ಹಾಗೂ ಎಐಸಿಸಿ ವರಿಷ್ಠರು ಮತ್ತೊಮ್ಮೆ ಪರಿಶೀಲನೆ ಮಾಡಿ ಟಿಕೆಟ್‌ ನೀಡಬೇಕು. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೆ ಏ.23ರಂದು ಬೆಂಬಲಿಗರ ಜೊತೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸುವುದು ಖಚಿತ. ಕ್ಷೇತ್ರದ ಅಭಿವೃದ್ಧಿಗಾಗಿ ಸ್ಪರ್ಧಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ಎಂದು ಹೇಳಿದರು.

ಮುಖಂಡರಾದ ಅಮ್ಜದ್‌ಪಾಷಾ, ಶಿವನಂಜು, ಶಿವಪ್ರಕಾಶ್, ಲೋಕೇಶ್ವರ್, ಕೆಬ್ಬಳ್ಳಿ ಆನಂದ್, ಶಾರದಾ, ನಾಗೇಂದ್ರ, ಮಧುಕುಮಾರ್, ಅನಂತ ಪದ್ಮನಾಭ, ಚಂದ್ರಕುಮಾರ್ ಇದ್ದರು.

ಅಂಬಿ ಹಠಾವೋ, ಮಂಡ್ಯ ಬಚಾವೋ!

‘ಅಂಬರೀಷ್ ಅವರಿಗೆ ತಾರಾ ವರ್ಚಸ್ಸಿನಿಂದ ಮಾತ್ರ ಟಿಕೆಟ್ ಸಿಕ್ಕಿದೆ. ಅವರ ಯಾವುದೇ ಕಾರ್ಯಗಳನ್ನು ಮೆಚ್ಚಿ ಜನರು ಅವರನ್ನು ಗೆಲ್ಲಿಸಿಲ್ಲ. ಕ್ಷೇತ್ರಕ್ಕಾಗಿ ದುಡಿಯುವ ರವಿಕುಮಾರ್‌ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು. ಅಂಬರೀಷ್‌ ಸ್ಪರ್ಧೆ ಮಾಡುವುದಾದರೆ ಅಂಬಿ ಹಠಾವೋ, ಮಂಡ್ಯ ಬಚಾವೋ ಘೋಷಣೆ ಯ ಮೂಲಕ ಅವರನ್ನು ಜನರು ಸೋಲಿಸುತ್ತಾರೆ’ ಎಂದು ಮುಖಂಡ ಕೆಬ್ಬಳ್ಳಿ ಆನಂದ್ ಎಚ್ಚರಿಕೆ ನೀಡಿದರು.

‘ಅಂಬರೀಷ್ ಅವರಿಗೆ ರಾಜಕೀಯ ನಿವೃತ್ತಿಯ ಕಾಲ ಬಂದಿದೆ. ಸೋತು ನಿವೃತ್ತರಾಗುವ ಬದಲು, ಈಗಲೇ ನಿವೃತ್ತಿ ಪಡೆಯುವುದು ಒಳ್ಳೆಯದು. ಕಾಂಗ್ರೆಸ್ ಹಾಗೂ ನಿಮ್ಮ ರಾಜಕೀಯ ಗೌರವ ಉಳಿಯಬೇಕಾದರೆ ನಿಮ್ಮ ಹಿತೈಷಿಗಳ ಸಭೆ ಕರೆದು ಕೃತಜ್ಞತೆ ಸಲ್ಲಿಸಿ ರಾಜಕೀಯ ನಿವೃತ್ತಿ ಪಡೆಯಬೇಕು.. ಸಿದ್ದರಾಮಯ್ಯ ಹಾಗೂ ದೇವೇಗೌಡರೊಂದಿಗೆ ಒಳ ಒಪ್ಪಂದ ಮಾಡಿಕೊಂಡರೂ ಅವರ ಗೆಲುವು ಸಾಧ್ಯವಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ನಾಗೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.