ADVERTISEMENT

ಪಿಎಸ್‌ಎಸ್‌ಕೆ ಆರಂಭಕ್ಕೆ ಸಿ.ಎಂ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:33 IST
Last Updated 8 ಸೆಪ್ಟೆಂಬರ್ 2017, 7:33 IST

ಶ್ರೀರಂಗಪಟ್ಟಣ: ‘ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯನ್ನು ಶೀಘ್ರ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು, ಅದಕ್ಕೆ ಅಗತ್ಯವಾದ ದುಡಿಯುವ ಬಂಡವಾಳ ನೀಡಲು ಅವರು ಸಮ್ಮತಿಸಿದ್ದಾರೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

‘ಬೆಂಗಳೂರಿನಲ್ಲಿ ಗುರುವಾರ ಪಿಎಸ್‌ಎಸ್‌ಕೆ ಆರಂಭ ಮತ್ತು ಕಬ್ಬು ಸರಬರಾಜುದಾರರಿಗೆ ಪ್ರೋತ್ಸಾಹ ಧನ ಬಿಡುಗಡೆ ಸಂಬಂಧ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಈ ವಿಷಯ ತಿಳಿಸಿದ್ದಾರೆ. ಪ್ರತಿ ಟನ್‌ ಕಬ್ಬಿಗೆ ₹ 200ರ ಬಾಬ್ತು ಒಟ್ಟು ₹ 6.77 ಕೋಟಿ ಪ್ರೋತ್ಸಾಹ ಧನ ನೀಡಲು ಸಿ.ಎಂ ಒಪ್ಪಿಕೊಂಡಿದ್ದಾರೆ. 2016–17ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿರುವವರಿಗೆ ಆದಷ್ಟು ಶೀಘ್ರ ಬಾಕಿ ಪ್ರೋತ್ಸಾಹ ಹಣ ನೀಡಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದ್ದಾರೆ. ಕಬ್ಬು ಸಾಗಣೆ ವೆಚ್ಚ ಬಾಬ್ತು ₹ 2 ಕೋಟಿ ಸಬ್ಸಿಡಿ ಹಣವನ್ನೂ ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಹೇಳಿದರು’ ಎಂದು ರಮೇಶ ಬಂಡಿಸಿದ್ದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕಾರ್ಖಾನೆ ಆರಂಭಿಸಲು ದುಡಿಯುವ ಬಂಡವಾಳ ಅಗತ್ಯವಿದ್ದು, ಅದಕ್ಕಾಗಿ ₹ 5 ಕೋಟಿವರೆಗೂ ಹಣ ಕೊಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಮೇಲುಕೋಟೆ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮತ್ತು ಪಿಎಸ್‌ಎಸ್‌ಕೆ ಅಧ್ಯಕ್ಷ ಹಾರೋಹಳ್ಳಿ ನಂಜುಂಡೇಗೌಡ ಅವರ ಸಮ್ಮುಖದಲ್ಲಿ ಅಭಯ  ನೀಡಿದ್ದಾರೆ.  ಕಬ್ಬು ಸಾಗಣೆಗೆ ನೀಡುವ  ರಿಯಾಯಿತಿ ಹಣ ₹ 2 ಕೋಟಿ  ಕೊಡಲೂ ಅವರು ಒಪ್ಪಿಕೊಂಡಿದ್ದಾರೆ.

ADVERTISEMENT

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ₹ 26 ಕೋಟಿ ಹಣ ನೀಡಿದೆ. ಅದಕ್ಕಾಗಿ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಪರವಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

‘ಕಬ್ಬು ಲಭ್ಯತೆ ನೋಡಿಕೊಂಡು ಕಾರ್ಖಾನೆ ಆರಂಭಿಸಲಾಗುವುದು. ಈ ಸಂಬಂಧ ಜನಪ್ರತಿನಿಧಿಗಳು ಮತ್ತು ಕಾರ್ಖಾನೆ ಆಡಳಿತ ಮಂಡಳಿಯ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.