ADVERTISEMENT

ಪುನಶ್ಚೇತನಕ್ಕೆ ಕಾದಿರುವ ಕೊತ್ತನಹಳ್ಳಿ ಕೆರೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:14 IST
Last Updated 23 ಮೇ 2017, 5:14 IST
ಮದ್ದೂರು ತಾಲ್ಲೂಕಿನ ಕೊತ್ತನಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡು ಜೊಂಡು ಬೆಳೆದಿರುವ ನೋಟ
ಮದ್ದೂರು ತಾಲ್ಲೂಕಿನ ಕೊತ್ತನಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡು ಜೊಂಡು ಬೆಳೆದಿರುವ ನೋಟ   

ಮದ್ದೂರು: ಸಮೀಪದ ಕೊತ್ತನಹಳ್ಳಿ ಗ್ರಾಮದ ಕೆರೆ ಪುನಶ್ಚೇತನಕ್ಕಾಗಿ ಕಾಯುತ್ತಿದೆ. ಶಿಂಷಾ ಬಲದಂಡೆ ವ್ಯಾಪ್ತಿಯ ಈ ಕೆರೆಗೆ ಶಿಂಷಾನದಿಗೆ ತಗ್ಗಹಳ್ಳಿ ಕಿರುಅಣೆಕಟ್ಟೆಯಿಂದ ನೀರು ಬರುತ್ತದೆ. ಈ ಕೆರೆ, ಕೊತ್ತನಹಳ್ಳಿ, ಚಾಪುರದೊಡ್ಡಿ ಎರಡು ಗ್ರಾಮಗಳಿಗೆ  170ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರು ಉಣಿಸುವ ಸಾಮರ್ಥ್ಯ ಹೊಂದಿದೆ. ಕೆರೆಗೆ ಎರಡು ತೂಬುಗಳಿದ್ದು, ಇವು ಹಾಳಾಗಿವೆ. ಕೆರೆಯ ನಾಲೆಗಳ ಲೈನಿಂಗ್ ಹಾಳಾಗಿದೆ. ಹೀಗಾಗಿ ನೀರು ಅಪವ್ಯಯವಾಗುತ್ತಿದೆ.

ಅಂದಾಜು 75 ಎಕರೆ ಪ್ರದೇಶ ವ್ಯಾಪ್ತಿಯ ಈ ಕೆರೆಯನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ ಕೆರೆಯಲ್ಲಿ ಅಗಾಧ ಹೂಳು ತುಂಬಿಕೊಂಡಿದ್ದು, ನೀರು ಸಂಗ್ರಹ ಸಾಮರ್ಥ್ಯ ಕುಸಿದಿದೆ. ದಿನಗಳದಂತೆ ಶಿಂಷಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಿದ ಪರಿಣಾಮವಾಗಿ ನದಿ ಹರವು ವಿಸ್ತಾರಗೊಂಡು ನೀರಿನ ಪೂರೈಕೆ ಪ್ರಮಾಣ ಕ್ಷೀಣಿಸಿತು. ಹೀಗಾಗಿ ಕೆರೆಗೆ ನೀರು ಲಭ್ಯವಾಗದೇ ಕರೆ ಒಣಗಲಾರಂಭಿಸಿತು. ಇದೀಗ ಕೆರೆಯಲ್ಲಿ ನೀರಿಲ್ಲದಿರುವ ಕಾರಣ ಜೊಂಡು ಬೆಳೆದಿದೆ. ನೀರಿನ ಸರಾಗ ಹರಿಯುವಿಕೆಗೂ ತೊಂದರೆಯಾಗಿದೆ. 

ಈಚೆಗೆ ಮದ್ದೂರು ಕೆರೆ ನಾಲೆಯಲ್ಲಿ ಈಚೆಗೆ ರೈತರು ಹೂಳು ಎತ್ತಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಅಲ್ಲಿಂದಲೂ ಈ ಕೆರೆಗೆ ನೀರು ಬರುವ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ರೈತರು. ಮುಂದಿನ ಮುಂಗಾರಿಗೆ ಕೆರೆ ತುಂಬುವ ನಿರೀಕ್ಷೆಯಿದೆ. ಇದಕ್ಕೆ ಮುನ್ನ ಕೆರೆಯ ಹೂಳು ಎತ್ತಿ ಸುಧಾರಣೆ ಮಾಡುವ ಕಾರ್ಯ ಆಗಬೇಕಿದೆ ಎನ್ನುತ್ತಾರೆ ಯುವ ಮುಖಂಡ ಚಾಪುರದೊಡ್ಡಿ ಸುರೇಶ್.

ADVERTISEMENT

ಕೊತ್ತನಹಳ್ಳಿ ಕೆರೆ ಸುಧಾರಣೆಗೆ ಈಗಾಗಲೇ ಸರ್ಕಾರಕ್ಕೆ ಅಂದಾಜು ₹ 85 ಲಕ್ಷ ಅನುದಾನ ಬಿಡುಗಡೆಗೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೊಳ್ಳುವ ನಿರೀಕ್ಷೆಯಿದ್ದು, ಕೆರೆ ಹೂಳು ಎತ್ತುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ.ತಮ್ಮಣ್ಣ. ಕೊತ್ತನಹಳ್ಳಿ ಕೆರೆ ಸುಧಾರಣೆಗೆ ಕ್ಷೇತ್ರ ಶಾಸಕ ಡಿ.ಸಿ.ತಮ್ಮಣ್ಣ ಅವರು ಮುತುವರ್ಜಿ ವಹಿಸಿ ಹಣ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.