ADVERTISEMENT

ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಕೊಡಿಸಿ

ಕರ್ನಾಟಕ ಮುಸ್ಲಿಂ ಎಂಪ್ಲಾಯಿಸ್‌ ಕಲ್ಚರಲ್‌ ಅಸೋಸಿಯೇಷನ್‌ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:40 IST
Last Updated 6 ಫೆಬ್ರುವರಿ 2017, 5:40 IST

ಶ್ರೀರಂಗಪಟ್ಟಣ: ಮುಸ್ಲಿಮರು ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಉರ್ದು ಮಾಧ್ಯ ಮಕ್ಕೆ ಬದಲಾಗಿ ಆಯಾ ಪ್ರಾದೇಶಿಕ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಸಲಹೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್‌ ಭವನ ದಲ್ಲಿ ಭಾನುವಾರ ‘ಕರ್ನಾಟಕ ಮುಸ್ಲಿಂ ಎಂಪ್ಲಾಯಿಸ್‌ ಕಲ್ಚರಲ್‌ ಅಸೋಸಿ ಯೇಷನ್‌ (ಕೆ–ಮೆಕ್ಕಾ)’ನ ಜಿಲ್ಲಾ ಸಮಿತಿ ಉದ್ಘಾಟಿಸಿ ಅವರು ಮಾತನಾಡಿದರು.

ಉರ್ದು ಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ನಮ್ಮಲ್ಲಿ ಅವಕಾಶ ಇಲ್ಲ. ಈ ಕಾರಣದಿಂದ ಮುಸ್ಲಿಂ ಜನಾಂಗದ ಸಾಕಷ್ಟು ಮಕ್ಕಳು ಅರ್ಧಕ್ಕೆ ಶಾಲೆ ತೊರೆಯುತ್ತಿದ್ದಾರೆ. ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ಯಾರೇಜ್‌ ಕೆಲಸಕ್ಕೆ ಸೀಮಿತರಾಗುತ್ತಾರೆ.

ರಾಜ್ಯದ ಆಡಳಿತ ಭಾಷೆ ಯಾವುದಾಗಿರು ತ್ತದೆಯೋ ಆ ಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ಕೆಎಎಸ್‌, ಐಎಎಸ್‌, ಐಪಿಎಸ್‌ ಇತರ ಉನ್ನತ ಶಿಕ್ಷಣ ಪಡೆಯಲು ಸುಲಭವಾಗುತ್ತದೆ ಎಂದು ಅವರು ಹೇಳಿದರು.

ಯಾವುದೇ ಸಂಘಟನೆಗಳು ಉಳಿಯಬೇಕಾದರೆ ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಬೇಕು. ಆರೋಗ್ಯ, ಶಿಕ್ಷಣ, ಸಾಮಾಜಿಕ ಪಿಡುಗು ಗಳ ಬಗ್ಗೆ ಅರಿವು ಮೂಡಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಶಿಕ್ಷಣ ಸಂಸ್ಥೆ ಸ್ಥಾಪನೆ, ಆರೋಗ್ಯ ಶಿಬಿರ ವನ್ನು ಏರ್ಪಡಿಸುವುದು ಇತರ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸರ್ಕಾರಿ ನೌಕರರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು ಎಂದರು.

ಕೆ–ಮೆಕ್ಕಾ ಸಂಸ್ಥಾಪಕ ಬುಢನ್‌ಖಾನ್‌ ಮಾತನಾಡಿ, ಒಳ್ಳೆಯ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಉತ್ತರ ಕರ್ನಾ ಟಕದಲ್ಲಿ ಈ ಸಂಘ ಉತ್ತಮ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತ ಮುಸ್ಲಿಂ ಜನಾಂಗ ಶೈಕ್ಷಣಿಕವಾಗಿ ಮತ್ತು ಆರ್ಥಿಕ ವಾಗಿ ಹಿಂದುಳಿದಿದೆ. ಈ ಜನಾಂಗ ಪ್ರಗತಿಯತ್ತ ಮುನ್ನಡೆಯಬೇಕಾದರೆ ಶಿಕ್ಷಣವೇ  ಅಸ್ತ್ರ ಎಂದು ತಿಳಿಸಿದರು.

ಮಾಜಿ ಶಾಸಕಿ ನಜ್ಮಾ ಹೆಫ್ತುಲ್ಲಾ, ಸಾಹಿತಿ ಪ್ರೊ. ಎಂ. ಕರಿಮುದ್ದೀನ್‌, ಕೆ–ಮೆಕ್ಕಾ ಜಿಲ್ಲಾಧ್ಯಕ್ಷ ಅಸ್ಗರ್‌ ಅಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ನಾಗೇಶ್‌, ತಾಲ್ಲೂಕು ಅಧ್ಯಕ್ಷ ಸಿ.ಜೆ. ಶ್ರೀನಿವಾಸ್‌, ಕಸಾಪ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗು, ಎಚ್‌.ಟಿ. ರಾಜಶೇಖರ್‌ ಮಾತನಾಡಿದರು.

ಕೆ.ಮೆಕ್ಕಾ ತಾಲ್ಲೂಕು ಅಧ್ಯಕ್ಷ ಹಫೀಜುಲ್ಲಾ, ಕಾರ್ಯದರ್ಶಿ ಸಯ್ಯದ್‌ ಖಾನ್‌ ಬಾಬು, ಉಪಾಧ್ಯಕ್ಷ ಅಬ್ದುಲ್‌ ಸಕ್ಕೂರ್‌, ಸಮೀವುಲ್ಲಾ ಇತರರು ಇದ್ದರು.
ಹಿಂದುಳಿದ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಡಾ.ಟಿಪ್ಪುಸುಲ್ತಾನ್‌, ಎಂ.ಎಸ್‌ಸಿಯಲ್ಲಿ ಚಿನ್ನದ ಪದಕ ಪಡೆದಿರುವ ವಸೀಂ ಇಮ್ರಾನ್‌, ಕಿರಿಯ ವಿಜ್ಞಾನಿ ಮೊಹಮದ್‌ ಸುಹೇಲ್‌, ಸಾಹಿತಿ ಪ್ರೊ.ಎಂ.ಕರಿಮುದ್ದೀನ್‌, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಬ್ದುಲ್ಲಾ ಬೇಗ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.