ADVERTISEMENT

ಪ್ರೇಕ್ಷಣೀಯ ಸ್ಥಳವಾಗಿ ಪಶ್ಚಿಮವಾಹಿನಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:36 IST
Last Updated 8 ಸೆಪ್ಟೆಂಬರ್ 2017, 7:36 IST
ಪಶ್ಚಿಮ ವಾಹಿನಿ ಸಂಗ್ರಹ ಚಿತ್ರ
ಪಶ್ಚಿಮ ವಾಹಿನಿ ಸಂಗ್ರಹ ಚಿತ್ರ   

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕಾವೇರಿ ನದಿ ತಟದಲ್ಲಿರುವ ಪಶ್ಚಿಮವಾಹಿನಿಯನ್ನು ಪ್ರೇಕ್ಷಣೀಯ ತಾಣವನ್ನಾಗಿ ರೂಪಿಸಲು ರೋಟರಿ ಮೈಸೂರು ಸಂಘಟನೆ ಯೋಜನೆ ರೂಪಿಸಿದೆ. ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲಾ ಸಭೆಯಲ್ಲಿ ರೋಟರಿ ಮೈಸೂರು ಸಂಘಟನೆ ತಂಡ ಪಶ್ಚಿಮವಾಹಿನಿ ಶುದ್ಧೀಕರಿಸಲು ತಯಾರಿಸಿರುವ ಸಾಕ್ಷ್ಯಚಿತ್ರ ಪ್ರದರ್ಶಿಸಿತು.

ಪಶ್ಚಿಮವಾಹಿನಿಯಲ್ಲಿ ಸ್ವಚ್ಛತೆ ಇಲ್ಲದೆ ಕಾರಣ ಅಸ್ಥಿ ವಿಸರ್ಜನೆ ಹಾಗೂ ಪೂಜೆ ಸಲ್ಲಿಸಲು ಬರುವ ಭಕ್ತರು ಸಮಸ್ಯೆ ಅನುಭವಿಸುತ್ತಿದ್ದಾರೆ. ನದಿಯಲ್ಲಿ ಸ್ನಾನ ಮಾಡುವ ಮಹಿಳೆಯರಿಗೆ ಬಟ್ಟೆ ಬದಲಿಸಲು ಪ್ರತ್ಯೇಕ ಸ್ಥಳವಿಲ್ಲ. ಶೌಚಾಲಯ ಇಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಪೂಜಾ ಸಾಮಗ್ರಿ, ನೀರಿನ ಬಾಟೆಲ್‌ ಚೆಲ್ಲಾಡುತ್ತಿದ್ದು ಅಶುದ್ಧತೆ ಇದೆ. ಈ ಸ್ಥಳವನ್ನು ಸ್ವಚ್ಛಮಾಡಿ ವಿವಿಧ ಸೌಲಭ್ಯ ನೀಡುವ ಕಾರ್ಯಸೂಚಿಯನ್ನು ಚಿತ್ರದ ಮೂಲಕ ಪ್ರದರ್ಶಿಸಿತು.

ಈ ಬಗ್ಗೆ ಮಾತನಾಡಿದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ವಿಜಯ್‌ ಕುಮಾರ್‌ ‘ಪಶ್ಚಿಮವಾಹಿನಿಯಲ್ಲಿ ಮಹಾತ್ಮ ಗಾಂಧೀಜಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಅಸ್ಥಿ ವಿಸರ್ಜನೆ ಮಾಡಲಾಗಿದೆ. ಈ ಬಗ್ಗೆ ಅಲ್ಲೊಂದು ಕಲ್ಲು ಸ್ಥಾಪಿಸಲಾಗಿದೆ. ಆದರೆ ಅದನ್ನು ಅಭಿವೃದ್ಧಿ ಮಾಡಲಾಗಿಲ್ಲ.

ADVERTISEMENT

ಈ ಜಾಗವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಗೊಳಿಸುವ ಅವಶ್ಯವಿದೆ ಇಲ್ಲಿಗೆ ಬರುವ ಜನರು ನೆಮ್ಮದಿಯಾಗಿ ಕುಳಿತು ಪೂಜೆ ಸಲ್ಲಿಸಲು ಯಾವುದೇ ವ್ಯವಸ್ಥೆ ಇಲ್ಲ. ಭಕ್ತರಿಗೆ ಸಕಲ ಸೌಲಭ್ಯ ಒದಗಿಸುವ ಬಗ್ಗೆ ಸರ್ಕಾರ ಚಿಂತಿಸಬೇಕು’ ಎಂದು ಹೇಳಿದರು.

‘ರೋಟರಿ ಮೈಸೂರು ಸಂಘಟನೆ ತಯಾರಿಸಿರುವ ಯೋಜನೆ ಚೆನ್ನಾಗಿದೆ. ಬಹಳ ದೂರದ ಊರುಗಳಿಂದ ಜನರು ಅಸ್ಥಿ ವಿಸರ್ಜನೆ ಮಾಡಲು ಪಶ್ಚಿಮವಾಹಿನಿಗೆ ಬರುತ್ತಾರೆ. ಇದನ್ನು ಪ್ರವಾಸಿ ತಾಣವಾಗಿ ರೂಪಿಸಲು ಶೀಘ್ರ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘₹70 ಲಕ್ಷ ವೆಚ್ಚದಲ್ಲಿ ಪಶ್ಚಿಮವಾಹಿನಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇ–ಶೌಚಾಲಯ, ಸ್ಥಳ ಸ್ವಚ್ಛಗೊಳಿಸಲುವ ಸ್ವಯಂಚಾಲಿತ ಯಂತ್ರ ಅಳವಡಿಕೆ, ಗಾಂಧಿ, ಒಡೆಯರ್‌ ಅಸ್ಥಿ ವಿಸರ್ಜನಾ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮತ್ತಿತರ ವಿಶೇಷತೆಗಳು ಯೋಜನೆಯಲ್ಲಿವೆ. ಈಗಾಗಲೇ ಶ್ರೀರಂಗಪಟ್ಟಣ ಪುರಸಭೆ ಅನುಮತಿ ನೀಡಿದೆ. ಜಿಲ್ಲಾಡಳಿತ ಅಗತ್ಯ ಹಣಕಾಸು ಸೌಲಭ್ಯ ನೀಡಿದರೆ ಶೀಘ್ರ ಕಾಮಗಾರಿ ಆರಂಭಿಸಲಾಗುವುದು’ ಎಂದು ರೋಟರಿ ಮೈಸೂರು ಸಂಘಟನೆಯ ಅಧ್ಯಕ್ಷ ಕೆ.ಆರ್‌.ಶಾಂತಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.