ADVERTISEMENT

ಬಿರುಗಾಳಿ ಮಳೆ: ಮರ ಧರೆಗೆ, ಕುಸಿದ ಮನೆಗಳು

​ಪ್ರಜಾವಾಣಿ ವಾರ್ತೆ
Published 21 ಮೇ 2018, 11:30 IST
Last Updated 21 ಮೇ 2018, 11:30 IST
ಹನಿಯಂಬಾಡಿ ಗ್ರಾಮದ ಮನೆಯ ಚಾವಣಿ ಹಾರಿ ಹೋಗಿರುವುದು
ಹನಿಯಂಬಾಡಿ ಗ್ರಾಮದ ಮನೆಯ ಚಾವಣಿ ಹಾರಿ ಹೋಗಿರುವುದು   

ಮಂಡ್ಯ: ಶನಿವಾರ ರಾತ್ರಿ ಸುರಿದ ಬಿರುಗಾಳಿ ಮಳೆಯಿಂದಾಗಿ ತಾಲ್ಲೂಕಿನ ಹನಿಯಂಬಾಡಿ, ಮದ್ದೂರು ತಾಲ್ಲೂಕಿನ ಕಡಿಲುವಾಗಿಲು ಗ್ರಾಮದ ಹಲವು ಮನೆಗಳ ಚಾವಣಿ ಹಾರಿ ಹೋಗಿದ್ದು ಅಪಾರ ಮೌಲ್ಯದ ಆಸ್ತಿ ಪಾಸ್ತಿಗೆ ಹಾನಿಯುಂಟಾಗಿದೆ.

ಹನಿಯಂಬಾಡಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಶನಿವಾರ ರಾತ್ರಿ ಆರಂಭವಾದ ಮಳೆ ಬಿರುಗಾಳಿ ಸಹಿತ ಸುರಿಯಿತು. ಕೆಲವೆಡೆ ಮರಗಳು ಧರೆಗುರುಳಿದ್ದು ಜನರು ಅಪಾರ ನಷ್ಟ ಅನುಭವಿಸಿದ್ದಾರೆ.

ಮರಗಳು ಬುಡಸಮೇತ ಧರೆಗುರುಳಿದ ಕಾರಣ ವಿದ್ಯುತ್‌ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಂಡ್ಯ ರಸ್ತೆಯಲ್ಲಿ ಬಿದ್ದಿದ್ದ ಭಾರಿ ಗಾತ್ರದ ಮರವನ್ನು ಯಂತ್ರದ ಮೂಲಕ ತೆರವುಗೊಳಿಸಲಾಯಿತು. ‘ಹನಿಯಂಬಾಡಿ, ಕಾರಸವಾಡಿ ಸೇರಿ ಸುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಸೆಸ್ಕ್‌ ಅಧಿಕಾರಿಗಳು ಶೀಘ್ರ ಕಂಬಗಳನ್ನು ದುರಸ್ತಿ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ADVERTISEMENT

ಹಾರಿ ಹೋದ ಮನೆಯ ಹೆಂಚುಗಳು

ಬಿರುಗಾಳಿ ಮಳೆಯ ಆರ್ಭಟಕ್ಕೆ ಮನೆಯ ಹೆಂಚು, ಶೀಟುಗಳು ಹಾರಿ ಹೋಗಿವೆ. ಹೀಗಾಗಿ ಜನರು ರಾತ್ರಿಯಿಡೀ ನಿದ್ದೆ ಮಾಡದೇ ಕಳೆದಿದ್ದಾರೆ. ಮನೆಯಲ್ಲಿ ತುಂಬಿದ್ದ ನೀರನ್ನು ಹೊರ ಹಾಕುವಲ್ಲೇ ಜನರು ನಿರತರಾಗಿದ್ದರು. ಮನೆಯಲ್ಲಿ ಸಂಗ್ರಹವಾಗಿದ್ದ ದವಸ ಧಾನ್ಯಗಳೆಲ್ಲವೂ ಮಳೆ ನೀರಿಗೆ ಒದ್ದೆಯಾದವು.

‘ಬಿರುಗಾಳಿ ಸಹಿತ ಮಳೆಯಿಂದ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚಿನ ಮನೆಗಳು ಹಾನಿಗೀಡಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಭೇಟಿ ಮಾಡಿ ಸೂಕ್ತ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಮದ್ದೂರು ತಾಲ್ಲೂಕಿನಲ್ಲೂ ಹಾನಿ: ಮದ್ದೂರು ತಾಲ್ಲೂಕಿನ ಕಡಿಲುವಾಗಿಲು ಗ್ರಾಮದಲ್ಲಿ ಹಲವು ಮನೆಗಳು ಕುಸಿದು ಬಿದ್ದಿವೆ. ತಾಯಮ್ಮ, ವಿವೇಕ ಅವರ ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದು ನಿವಾಸಿಗಳು ಬೀದಿಗೆ ಬಂದಿದ್ದಾರೆ. ಈ ಕುಟುಂಬಗಳಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಉರುಳಿದ ಮರಗಳು...

ನಾಗಮಂಗಲ: ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಗಾಳಿ ಸಹಿತ ಬಿದ್ದ ಆಲಿಕಲ್ಲು ಮಳೆಗೆ ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಯಿತು.

ಕಸಬಾ ಹೋಬಳಿ ಮುಳಕಟ್ಟೆ ಗ್ರಾಮದ ಪುಟ್ಟಸ್ವಾಮಿಗೌಡರ ಶಾಮಿಯಾನ ಮತ್ತು ವಾಸವಿದ್ದ ಮನೆಯ ಚಾವಣಿಗೆ ಹಾಕಲಾಗಿದ್ದ ಕಲ್ನಾರು ಶೀಟ್‌ಗಳು ಹಾರಿಹೋಗಿದ್ದು ಮನೆಯವರು ರಾತ್ರಿಯಿಡಿ ಜಾಗರಣೆ ಮಾಡುವಂತಾಯಿತು.

ಕಸಬಾ ಹೋಬಳಿಯ ಬ್ಯಾಡರಹಳ್ಳಿ, ಹಾಲತಿ ಮತ್ತಿತರ ಗ್ರಾಮಗಳಲ್ಲಿ ಭಾರಿ ಗಾತ್ರದ ಆಲಿಕಲ್ಲುಗಳು ಬಿದ್ದ ಪರಿಣಾಮ ರೈತರು ಬೆಳೆದಿದ್ದ ತರಕಾರಿಗಳು ಮಣ್ಣು ಪಾಲಾಗಿವೆ.

ಪಟ್ಟಣದ ಮೈಲಾರಪಟ್ಟಣ ಮುಖ್ಯರಸ್ತೆಯಲ್ಲಿ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಕೆಲಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾತ್ರಿಯಿಡಿ ಗುಡುಗು, ಮಿಂಚು ಸಹಿತ ಮಳೆ ಸುರಿದು ಧರೆಯನ್ನು ತಂಪಾಗಿಸಿತು. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ಸಮಾಧಾನ ತಂದಿತು.

ಮನೆ ಮೇಲೆ ಬಿದ್ದ ಮರ

ಶ್ರೀರಂಗಪಟ್ಟಣ: ತಾಲ್ಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರವೊಂದು ನಾರಾಯಣ ಎಂಬುವರ ಮನೆಯ ಮೇಲೆ ಬಿದ್ದಿದೆ.

ನಾರಾಯಣ ಟಿಎಪಿಸಿಎಂಎಸ್‌ ಉಪಾಧ್ಯಕ್ಷರಾಗಿದ್ದಾರೆ. ಅವರ ಮನೆಯ ಹೆಂಚುಗಳು ಒಡೆದಿವೆ. ಜಂತಿ ಮತ್ತು ರಿಪೀಸುಗಳು ಭಾಗಶಃ ಜಖಂಗೊಂಡಿವೆ.

ತಾಲ್ಲೂಕಿನ ಅರಕೆರೆ, ಕೆ.ಶೆಟ್ಟಹಳ್ಳಿ, ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಮುಂಗಾರುಪೂರ್ವ ಮಳೆಗೆ ರೈತರು ಹರ್ಷಗೊಂಡಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಭೂಮಿ ಹಸನು ಮಾಡುಕೊಳ್ಳಲು ಈ ಮಳೆ ಸಹಕಾರಿಯಾಗಲಿದೆ ಎಂದು ರೈತರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.