ADVERTISEMENT

ಬಿಸಿಯೂಟ ನೌಕರರಿಗೆ ಸರ್ಕಾರಿ ಸೌಲಭ್ಯ ನೀಡಿ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:05 IST
Last Updated 15 ಮೇ 2017, 7:05 IST
ಪಾಂಡವಪುರ: ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಹದೇವಮ್ಮ ಒತ್ತಾಯಿಸಿದರು. 
 
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಬಿಸಿಯೂಟ ನೌಕರರ ಸಭೆ ನಡೆಸಿ ಮಾತನಾಡಿದ ಅವರು, ‘ಸರ್ಕಾರಿ ನೌಕರರಿಗೆ ದೊರೆಯುತ್ತಿರುವ ಪಿಎಫ್‌, ಇಎಸ್‌ಐ, ಹೆರಿಗೆ ರಜೆ ಸೇರಿದಂತೆ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು.
 
ರಾಜ್ಯ ಸರ್ಕಾರ ಕೇಂದ್ರಿಕೃತ ಅಡುಗೆ ಮನೆಯ ಮೂಲಕ ಬಿಸಿಯೂಟ ತಯಾರಿಸಬೇಕು ಎನ್ನುವ ಚಿಂತನೆ ನಡೆಸುತ್ತಿದೆ. ಈ ಯೋಜನೆಯನ್ನು ಕೈಬಿಡಬೇಕು. ಪಕ್ಕದ ತಮಿಳುನಾಡು ರಾಜ್ಯದಲ್ಲಿ ಬಿಸಿಯೂಟ ನೌಕರರಿಗೆ ದೊರೆಯುತ್ತಿರುವ ಸೌಲಭ್ಯಗಳ ಮಾದರಿಯಲ್ಲಿಯೇ ಬಿಸಿಯೂಟ ನೌಕರರಿಗೆ ಒದಗಿಸಬೇಕು’ ಎಂದು ಒತ್ತಾಯಿಸಿದರು. 
 
‘ರಾಜ್ಯದಲ್ಲಿ ಸುಮಾರು 1.19 ಲಕ್ಷ ಮಂದಿ ಮಹಿಳಾ ನೌಕರರು ಸರ್ಕಾರದ ಅಂಗ ಸಂಸ್ಥೆಯಾದ ಅಕ್ಷರ ದಾಸೋಹ ಕಾರ್ಯಕ್ರಮದಡಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಮಹಿಳಾ ನೌಕರರಿಗೆ ಸರ್ಕಾರ ಕನಿಷ್ಠ ವೇತನವನ್ನು ನಿಗಧಿಮಾಡದೆ ಕೇವಲ ₹ 2 ಸಾವಿರ ಗೌರವ ಧನವನ್ನು ನೀಡಿ ದುಡಿಸಿಕೊಳ್ಳುತ್ತಿದೆ.
 
ಕಳೆದ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಬಿಸಿಯೂಟ ನೌಕರರ ಬೇಡಿಕೆಯನ್ನು ಈಡೇರಿಸುತ್ತದೆ ಎಂಬ ವಿಶ್ವಾಸದಲ್ಲಿದ್ದವು. ಆದರೆ ಸರ್ಕಾರ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಿಸಿ ಬಿಸಿಯೂಟ ನೌಕರರನ್ನು  ಕಡೆಗಣಿಸಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ನಮ್ಮ ಹಕ್ಕಿಗಾಗಿ ನಾವು ಹೋರಾಡಬೇಕಿದೆ. ಬಿಸಿಯೂಟ ನೌಕರರು ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು. 
 
ಮೇ 25 ಪ್ರತಿಭಟನೆ:  ರಾಜ್ಯದ ಎಲ್ಲ ಜಿಲ್ಲಾಪಂಚಾಯಿತಿ ಕಚೇರಿ ಎದುರು ಮೇ25ರಂದು ಪ್ರತಿಭಟನೆ ನಡೆಸಿ ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರಾದ ಜಯಲಕ್ಷ್ಮಮ್ಮ, ಮಂಜುಳಾ, ಸರಸ್ವತಿ, ಶಾರದಾ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.